ಉಡುಪಿ: ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ (ಕೆಸಿಎಸ್‌ಸಿ) ಉಡುಪಿ ಸಂಸ್ಥೆಯ 32ನೇ ವಾರ್ಷಿಕೋತ್ಸವ ಹಾಗೂ ಓಣಂ ಹಬ್ಬ ಆಚರಣೆ ಕಾರ್ಯಕ್ರಮ ಇದೇ ಸೆ.20ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಲಿದೆ ಎಂದು ಹಿರಿಯ ಸಾಹಿತಿ ಡಾ. ಪಾರ್ವತಿ ಜಿ. ಐತಾಳ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 8ರಿಂದ ಪೂಕಳಂ ಸ್ಪರ್ಧೆ, ಹಗ್ಗಾಜಗ್ಗಾಟ ಸ್ಪರ್ಧೆ ಹಾಗೂ ಮಡಿಕೆ ಒಡೆಯುವ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 9ಗಂಟೆಗೆ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಲಿವೆ. ಬೆಳಿಗ್ಗೆ 10 ಗಂಟೆಗೆ ಮಕ್ಕಳ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.50ಕ್ಕೆ ಸಭಾಕಾರ್ಯಕ್ರಮ ನಡೆಯಲಿದ್ದು, ಕೆಸಿಎಸ್‌ಸಿ ಅಧ್ಯಕ್ಷ ರಾಜನ್ ಜಿ. ಪಿಲಿಪ್ಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಸಚಿವ ಯು.ಟಿ. ಖಾದರ್ ಫರೀದ್, ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮಾಹೆ ಹೆಲ್ತ್ ಸೈನ್ಸಸ್ ಪ್ರೊ. ವೈಸ್ ಚಾನ್ಸೆಲರ್ ಡಾ. ಮ್ಯಾಥ್ಯೂಸ್ ಜಾಕೋಬ್, ನೋರ್ಕಾ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಕೆ. ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪಂಚರತ್ನ ಪ್ರಶಸ್ತಿ ಪ್ರದಾನ:
ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಡಾ. ವಿನೋದ್ ವಿ. ಥೋಮಸ್, ಆರೋಗ್ಯ ಕ್ಷೇತ್ರದ ಸಾಧನೆಗಾಗಿ ಡಾ. ರಾಜೇಶ್ ನಾಯರ್, ಕೃಷಿ ಕ್ಷೇತ್ರದ ಸಾಧನೆಗಾಗಿ ಎಂ.ಎಲ್. ಜೋಸೆಫ್, ಕಲೆ–ಸಂಸ್ಕೃತಿ ಕ್ಷೇತ್ರದ ಸಾಧನೆಗಾಗಿ ಲಿಯಾಕತ್ ಅಲಿ ಹಾಗೂ ಯುವ ನೃತ್ಯ ಕಲಾವಿದೆ ಸಾನ್ವಿ ರಾಜೇಶ್ ಅವರಿಗೆ 2026ನೇ ಸಾಲಿನ ಕೆಸಿಎಸ್‌ಸಿ ಪಂಚರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಂಸ್ಥೆಯ ಸದಸ್ಯರ ಕುಟುಂಬಗಳ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುವುದು ಎಂದರು.
ಮಲಯಾಳಂ ಮಿಷನ್ ಮೂಲಕ ಮಲಯಾಳಂ ಭಾಷೆ ಕಲಿಕೆಗೆ ವ್ಯವಸ್ಥೆ ಹಾಗೂ ನೋರ್ಕಾ ಮೂಲಕ ಕೇರಳ ಸರ್ಕಾರ ನೀಡುವ ಆರೋಗ್ಯ ವಿಮೆ ಸೌಲಭ್ಯವನ್ನು ಸದಸ್ಯರ ಕುಟುಂಬಗಳಿಗೆ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. 70 ವರ್ಷ ಮೇಲ್ಪಟ್ಟವರಿಗಾಗಿ ‘ಸೂಪರ್ ಸೆವೆಂಟಿ’ ಶಾಖೆ ಹಾಗೂ ಯುವಕರನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ‘ಯೂತ್ ವಿಂಗ್’ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ವೈಭವ:
ಸಮಾರಂಭದ ವಿಶೇಷ ಆಕರ್ಷಣೆಯಾಗಿ ಮಲಯಾಳಂ ನಟ ರಾಜೇಶ್ ಹೆಬ್ಬಾರ್ ಭಾಗವಹಿಸಲಿದ್ದು, ಕಲಾಭವನ್ ರಾಜೇಶ್ ನೇತೃತ್ವದಲ್ಲಿ ಕಿರುತೆರೆಯ ಪ್ರಸಿದ್ಧ ಗಾಯಕರಿಂದ ಆರ್ಕೆಸ್ಟ್ರಾ ನಡೆಯಲಿದೆ. ಕೆಸಿಎಸ್‌ಸಿ ಕುಟುಂಬ ಸದಸ್ಯರಿಂದ ಸ್ವಾಗತ ನೃತ್ಯ, ಪುಷ್ಪಾಂಜಲಿ, ತಿರುವಾದಿರ ಕಳಿ, ಭರತನಾಟ್ಯ, ಮೋಹಿನಿಯಾಟ್ಟಂ, ಫ್ಯೂಷನ್ ಡಾನ್ಸ್, ಕೊಯಿತು ಪಾಟ್ಟು ಡಾನ್ಸ್, ಕೈಕೊಟ್ಟಿಕಲಿ, ಮಹಾಭಾರತ ಥೀಮ್ ಹಾಗೂ ಸಿನೆಮಾಟಿಕ್ ಡಾನ್ಸ್‌ಗಳು ನಡೆಯಲಿವೆ.
ಕಾಲೇಜು ವಿದ್ಯಾರ್ಥಿನಿಯರಿಗಾಗಿ ‘ಅತ್ತಾಪೂಕಳಂ’ ಹೂವಿನ ರಂಗೋಲಿ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ.
ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಮಿತ್ರ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ. ಮಧ್ಯಾಹ್ನ ಕೇರಳದ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ಒಳಗೊಂಡ ಓಣಸದ್ಯ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಸಿಎಸ್‌ಸಿ ಅಧ್ಯಕ್ಷ ರಾಜನ್ ಜಿ. ಪಿಲಿಪ್ಸ್, ಕಾರ್ಯದರ್ಶಿ ಬಿನೇಶ್ ವಿ.ಸಿ., ಉಪಾಧ್ಯಕ್ಷ ಶೀನೊದ್ ಟಿ.ಆರ್, ಸದಸ್ಯ, ಪತ್ರಕರ್ತ ಮೊಹಮ್ಮದ್ ಶರೀಫ್ ಉಪಸ್ಥಿತರಿದ್ದರು.

