Saturday, September 19, 2026

ಕಾಂಗ್ರೆಸ್ ಬಲವರ್ಧನೆಗೆ ತಳಮಟ್ಟದಿಂದಲೇ ಕಾರ್ಯ: ಕಿಶನ್ ಹೆಗ್ಡೆ

Must read

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಗುರುವಾರ ಅಧಿಕಾರ ಸ್ವೀಕರಿಸಿದರು.
ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮನ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಕಿಶನ್ ಹೆಗ್ಡೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಕಿಶನ್ ಹೆಗ್ಡೆ, ‘ತಾನು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯವೂ ಕಾಂಗ್ರೆಸ್ ಅಧ್ಯಕ್ಷನ ನಿರ್ಣಯವಲ್ಲ; ಸಾಮಾನ್ಯ ಕಾರ್ಯಕರ್ತನ ನಿರ್ಣಯವಾಗಿರುತ್ತದೆ. ಪಕ್ಷ ನೀಡಿದ ಅವಕಾಶ ಹಾಗೂ ಗೌರವವನ್ನು ಎಂದಿಗೂ ಮರೆಯುವುದಿಲ್ಲ’ ಎಂದರು.
‘ತಮ್ಮ ವಿಚಾರಗಳನ್ನು ವೇದಿಕೆಯಲ್ಲಿ ಹೇಳುವುದಕ್ಕಿಂತ ಕಾರ್ಯಕರ್ತರ ಮನೆ ಬಾಗಿಲಿಗೆ ತೆರಳಿ ನೇರವಾಗಿ ಹಂಚಿಕೊಳ್ಳಲು ಆದ್ಯತೆ ನೀಡುತ್ತೇನೆ. ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಅಭಿಪ್ರಾಯಗಳಿಗೆ ಸ್ಪಂದಿಸುವುದು ಉದ್ದೇಶ. ತಾಳ್ಮೆಯಿಂದ ಕಾದರೆ ಕಾಂಗ್ರೆಸ್‌ನಲ್ಲಿ ಯಾವುದೇ ಸ್ಥಾನಮಾನ ದೊರೆಯಬಹುದು ಎಂಬುದಕ್ಕೆ ತಾನೇ ಉದಾಹರಣೆ’ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಇದು ಅಧಿಕಾರ ಹಸ್ತಾಂತರವಲ್ಲ, ಜವಾಬ್ದಾರಿ ಹಸ್ತಾಂತರ. ಈ ಹಿಂದೆ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ರಾಷ್ಟ್ರೀಯ ನಾಯಕರು ಅಧಿಕಾರ ನೀಡುತ್ತಿದ್ದರು. ಇದೀಗ ಕಾರ್ಯಕರ್ತರ ಅಭಿಪ್ರಾಯ ಪಡೆದು ಆಯ್ಕೆ ಮಾಡಲಾಗಿದೆ ಎಂದರು.
ಪಕ್ಷದ ಎಲ್ಲ ಕಾರ್ಯಕರ್ತರ ಬೇಡಿಕೆಗಳಿಗೆ ಯಾವುದೇ ಬೇಧಭಾವವಿಲ್ಲದೆ ಸ್ಪಂದಿಸಬೇಕು. ಕಾಂಗ್ರೆಸ್ ಕಚೇರಿ ದಿನದ 24 ಗಂಟೆಯೂ ಕಾರ್ಯಕರ್ತರಿಗೆ ಲಭ್ಯವಾಗುವಂತಾಗಬೇಕು. ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ನಿರ್ಗಮನ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, 7 ವರ್ಷ 7 ತಿಂಗಳ ಅಧಿಕಾರಾವಧಿಯಲ್ಲಿ ಸಹಕರಿಸಿದ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷರೊಂದಿಗೆ ಸಂಪೂರ್ಣ ಸಹಕಾರದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಹರಿಪ್ರಸಾದ್ ರೈ, ವೆರೋನಿಕ ಕರ್ನೆಲಿಯೋ, ವಿಶ್ವಾಸ್ ಅಮೀನ್, ಕೃಷ್ಣ ಶೆಟ್ಟಿ ಬಜಗೋಳಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಜ್ಯೋತಿ ಹೆಬ್ಬಾರ್, ಪ್ರಶಾಂತ್ ಜತ್ತನ್ನ, ರಾಜಶೇಖರ್ ಕೋಟ್ಯಾನ್, ರೋಶನಿ ಒಲಿವರ್ ಹಾಗೂ ಇತರರು ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here