ಉಡುಪಿ: ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಭೇಟಿ ನೀಡುವ ರಾಜ್ಯದ ಕೋಟ್ಯಾಂತರ ಭಕ್ತರ ಅನುಕೂಲಕ್ಕಾಗಿ ರಾಜ್ಯ ಸರಕಾರ ಸುಸಜ್ಜಿತ ಕರ್ನಾಟಕ ಭವನ ನಿರ್ಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಗೆ ಹಾಗೂ ಭವ್ಯ ರಾಮ ಮಂದಿರದ ಉದ್ಘಾಟನೆಗೆ ಈಗಾಗಲೇ ವಿಶ್ವದೆಲ್ಲೆಡೆ ದಿನಗಣನೆ ಶುರುವಾಗಿದೆ.
ಶ್ರೀ ರಾಮ ಮಂದಿರದ ನಿರ್ಮಾಣದ ಇತಿಹಾಸಗಳ ಕೋಟ್ಯಾಂತರ ಭಾರತೀಯರ ಕನಸು ಸಾಕಾರವಾಗುತ್ತಿದ್ದು, ಅಯೋಧ್ಯೆಯು ಮುಂದಿನ ದಿನಗಳಲ್ಲಿ ಕೋಟ್ಯಾಂತರ ಭಕ್ತಾಧಿಗಳ ಪಾಲಿಗೆ ಪ್ರಾಶಸ್ತ್ಯದ ಪುಣ್ಯ ಕ್ಷೇತ್ರವಾಗಿ ರೂಪುಗೊಳ್ಳಲಿದೆ.
ಅಯೋಧ್ಯೆಯಲ್ಲಿ ಶ್ರೀರಾಮ ದೇವರ ದರ್ಶನ ಪಡೆಯಲು ದೇಶದ ಹಲವು ಕಡೆಗಳಿಂದ ಭಕ್ತರು ಆಗಮಿಸಲಿದ್ದು ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಬಹುದೊಡ್ಡ ಸಂಖ್ಯೆಯ ಶ್ರೀರಾಮ ದೇವರ ಆರಾಧಕರಿದ್ದು ಅಯೋಧ್ಯೆಗೆ ಲಕ್ಷಾಂತರ ಜನರು ನಿಯಮಿತವಾಗಿ ತೆರಳಲಿದ್ದಾರೆ.
ದೇಶದ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ಕರ್ನಾಟಕ ಭವನದ ನಿರ್ಮಾಣದಿಂದಾಗಿ ಕರ್ನಾಟಕದ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಸಾಕಷ್ಟು ಅನುಕೂಲವಾಗಿರುತ್ತದೆ.
ಶ್ರೀರಾಮ ದೇವರ ದರ್ಶನ ಪಡೆಯಲು ತೆರಳುವ ಕನ್ನಡಿಗರ ವಿಶ್ರಾಂತಿಗೆ ಹಾಗೂ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ಅಯೋಧ್ಯೆಯಲ್ಲಿ ಒಂದು ಕರ್ನಾಟಕ ಭವನ ನಿರ್ಮಾಣದ ಅಗತ್ಯವಿದ್ದು ಕರ್ನಾಟಕದಿಂದ ಅಯೋಧ್ಯೆಗೆ ತೆರಳಲಿರುವ ಕನ್ನಡಿಗರ ವಾಸ್ತವ್ಯಕ್ಕೆ ಸಹಾಯವಾಗುವಂತೆ ಕರ್ನಾಟಕ ಭವನವನ್ನು ಅಯೋಧ್ಯೆಯಲ್ಲಿ ಶೀಘ್ರವಾಗಿ ನಿರ್ಮಾಣ ಮಾಡಿ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡಿ ಕೊಡುವಂತೆ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.