ಉಡುಪಿ: ಬೈಂದೂರು ತಾಲೂಕಿನ ಶಿರೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಉಪ್ಪುಂದ ಜನತಾ ಕಾಲೊನಿಯ ಅಭಿಷೇಕ ಖಾರ್ವಿ (23) ಹಾಗೂ ಪ್ರವೀಣ ಖಾರ್ವಿ (23) ಎಂದು ಗುರುತಿಸಲಾಗಿದೆ.
ಉಪ್ಪುಂದದ ಕೊಡಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿದ್ದ ಇಬ್ಬರು ಯುವಕರ ದುರಂತ ಸಾವು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ಪ್ರವೀಣ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರೆ, ಅಭಿಷೇಕ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಇಬ್ಬರೂ ಬಡ ಕುಟುಂಬದವರಾಗಿದ್ದು, ಯುವಕರ ಅಕಾಲಿಕ ಸಾವು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಸೋಮವಾರ ರಾತ್ರಿ ಇಬ್ಬರೂ ಉಪ್ಪುಂದದಿಂದ ಶಿರೂರು ಟೋಲ್‌ಗೇಟ್ ಕಡೆಗೆ ತೆರಳುತ್ತಿದ್ದಾಗ ಶಿರೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಇಬ್ಬರ ತಲೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಶಿರೂರಿನಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಯುವಕರು ಸ್ಥಳದಲ್ಲೇ ಸಾವು

