ಉಡುಪಿ: ಗ್ಯಾರಂಟಿ ಯೋಜನೆಗಳ ಸಮಾವೇಶಕ್ಕೆ ಗ್ರಾಮ ಪಂಚಾಯಿತಿಗಳಿಂದ ಅನುದಾನ ಬಳಸಿಕೊಳ್ಳುತ್ತಿರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, “ಸರಕಾರ ನಡೆಸುವಾಗ ಯಾವ ಉದ್ದೇಶಕ್ಕೆ, ಎಲ್ಲಿಂದ ಹಣ ಖರ್ಚು ಮಾಡಬೇಕು ಎಂಬುದನ್ನು ಬಿಜೆಪಿಯನ್ನು ಕೇಳಿ ನಿರ್ಧರಿಸಲು ಸಾಧ್ಯವೇ? ಯಾಕಾಗಿ ಖರ್ಚು ಮಾಡುತ್ತಿದ್ದೇವೆ ಎನ್ನುವುದು ಮುಖ್ಯ. ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲ ಮಾಡಿಕೊಡುವ ಜನಪರ ಕಾರ್ಯಕ್ರಮಗಳಾಗಿವೆ” ಎಂದು ತಿರುಗೇಟು ನೀಡಿದರು.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ತಪ್ಪು ಆರ್ಥಿಕ ನೀತಿಗಳಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಬಡ ಹಾಗೂ ಸಾಮಾನ್ಯ ಜನರಿಗೆ ಆರ್ಥಿಕ ನೆರವು ನೀಡುತ್ತಿವೆ. ಈ ಯೋಜನೆಗಳಿಂದ ಜನರ ಜೀವನದಲ್ಲಿ ಸುಧಾರಣೆ ಕಂಡುಬಂದಿದೆ. ಮೂರುವರೆ ವರ್ಷಗಳಿಂದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದೇವೆ. ಇದರಿಂದ ಜನರಿಗೆ ಆಗಿರುವ ಅನುಕೂಲವನ್ನು ಜನರೇ ಹೇಳುತ್ತಿದ್ದಾರೆ ಎಂದರು.
ಮೊದಲ ಬಾರಿಗೆ ಉಡುಪಿಯಲ್ಲಿ ಗ್ಯಾರಂಟಿ ಯೋಜನೆಗಳ ಸಮಾವೇಶ ಆಯೋಜಿಸಲಾಗುತ್ತಿದೆ. ಸರಕಾರ ಜನರಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ಅರಿವು ಮೂಡಿಸುವುದು ನಮ್ಮ ಜವಾಬ್ದಾರಿ. ಜನರಿಗೆ ನೆರವು ನೀಡುತ್ತಿರುವುದು ಕಾಂಗ್ರೆಸ್ ಸರಕಾರ. ಗ್ರಾಮ ಪಂಚಾಯಿತಿಗಳ ಮೂಲಕವೂ ಜನಪರ ಕಾರ್ಯಗಳನ್ನೇ ಮಾಡುತ್ತಿದ್ದೇವೆ. ಇದು ಜನರಿಗಾಗಿ ಆಯೋಜಿಸಿರುವ ಕಾರ್ಯಕ್ರಮವಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಇಂತಹ ಜನಪರ ಯೋಜನೆಗಳನ್ನು ಯಾಕೆ ಜಾರಿಗೊಳಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರಕಾರ ಜನರ ಹಿತದೃಷ್ಟಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಬಿಜೆಪಿಗೆ ಅಸಮಾಧಾನವಾಗುವುದು ಸಹಜ. ಜನರಿಗೆ ಅನುಕೂಲವಾಗುತ್ತಿರುವುದನ್ನು ಕಂಡು ಬಿಜೆಪಿಗೆ ಹೊಟ್ಟೆನೋವು ಉಂಟಾಗುತ್ತಿದೆ. ಜನಪರ ಕಾರ್ಯಕ್ರಮಗಳಿಗೆ ವಿರೋಧ ವ್ಯಕ್ತಪಡಿಸಿದರೆ ನಾವು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಗ್ಯಾರಂಟಿ ಸಮಾವೇಶದ ಖರ್ಚಿಗೆ ಬಿಜೆಪಿಯ ಅಪ್ಪಣೆ ಪಡೆಯಬೇಕೇ?

