Monday, November 23, 2026

ಪಂಚಾಯಿತಿ ಅನುದಾನವನ್ನು ಗ್ಯಾರಂಟಿ ಸಮಾವೇಶದ ಊಟಕ್ಕೆ ಬಳಸಲು ಆಕ್ಷೇಪ

Must read

ಉಡುಪಿ: ಗ್ರಾಮ ಪಂಚಾಯಿತಿಗಳ ಸ್ವಂತ ನಿಧಿಯನ್ನು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದ ಊಟೋಪಚಾರಕ್ಕೆ ಬಳಸುವಂತೆ ಸರ್ಕಾರ ಸೂಚಿಸಿರುವುದಕ್ಕೆ ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನರ ಮೂಲಭೂತ ಸೌಕರ್ಯಗಳಿಗಾಗಿ ಮೀಸಲಾದ ಪಂಚಾಯಿತಿ ಅನುದಾನವನ್ನು ರಾಜಕೀಯ ಕಾರ್ಯಕ್ರಮಗಳ ವೆಚ್ಚಕ್ಕೆ ಬಳಸುವುದು ಸರಿಯಲ್ಲ. ಈ ಕುರಿತು ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿರುವ ಅವರು, ಸರ್ಕಾರದ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ನ.17ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು, ನ.24ರಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಆಯೋಜಿಸುವಂತೆ ಸೂಚಿಸಿದ್ದಾರೆ. ಸಮಾವೇಶಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳನ್ನು ಕರೆತರುವುದರ ಜತೆಗೆ, ಅವರ ಊಟೋಪಚಾರದ ವೆಚ್ಚವನ್ನು ಆಯಾ ಗ್ರಾಮ ಪಂಚಾಯಿತಿಗಳ ಸ್ವಂತ ನಿಧಿಯಿಂದ ಭರಿಸುವಂತೆ ನಿರ್ದೇಶನ ನೀಡಲಾಗಿದೆ. ಇದಕ್ಕೆ ಗರಿಷ್ಠ ₹25 ಸಾವಿರ ಮಿತಿ ನಿಗದಿಪಡಿಸಲಾಗಿದೆ.
ಈಗಾಗಲೇ ಅನುದಾನದ ಕೊರತೆಯಿಂದ ಹಲವು ಗ್ರಾಮ ಪಂಚಾಯಿತಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. 15ನೇ ಹಣಕಾಸು ಯೋಜನೆಯ ಅನುದಾನವೂ ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ, ಗ್ರಾಮೀಣ ರಸ್ತೆಗಳು ಹಾಗೂ ಚರಂಡಿಗಳ ನಿರ್ವಹಣೆ ಸೇರಿದಂತೆ ತುರ್ತು ಮೂಲಸೌಕರ್ಯ ಕಾಮಗಾರಿಗಳಿಗೆ ಹಣ ಹೊಂದಿಸಲು ಪಂಚಾಯಿತಿಗಳು ಪರದಾಡುತ್ತಿವೆ. ಇಂತಹ ಸಂದರ್ಭದಲ್ಲಿ ಪಂಚಾಯಿತಿಗಳ ಸೀಮಿತ ಸ್ವಂತ ನಿಧಿಯನ್ನು ಸಮಾವೇಶದ ಊಟೋಪಚಾರಕ್ಕೆ ಬಳಸುವಂತೆ ಸೂಚಿಸಿರುವುದು ಜನರ ಮೂಲಭೂತ ಅಗತ್ಯಗಳಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಯಾವುದೇ ಚರ್ಚೆ ನಡೆಸದೆ ಅಥವಾ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಆದೇಶ ಹೊರಡಿಸಿರುವುದು ಆಕ್ಷೇಪಾರ್ಹ. ಗ್ರಾಮ ಪಂಚಾಯಿತಿಗಳು ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಜಾಪ್ರಭುತ್ವದ ತಳಮಟ್ಟದ ಸಂಸ್ಥೆಗಳಾಗಿವೆ. ಅವುಗಳ ಅನುದಾನವನ್ನು ಸ್ಥಳೀಯ ಅಭಿವೃದ್ಧಿ ಹಾಗೂ ಜನರ ಅಗತ್ಯಗಳಿಗೆ ಬಳಸಬೇಕೇ ಹೊರತು ಇಂತಹ ಸಮಾವೇಶಗಳ ಖರ್ಚಿಗೆ ಬಳಸಬಾರದು. ಆದ್ದರಿಂದ ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here