Monday, November 23, 2026

ಗ್ರಾಮ ಪಂಚಾಯಿತಿ ಅನುದಾನ ಗ್ಯಾರಂಟಿ ಸಮಾವೇಶಕ್ಕೆ ಬಳಕೆ: ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರ ತೀವ್ರ ವಿರೋಧ

Must read

ಉಡುಪಿ: ಗ್ರಾಮ ಪಂಚಾಯಿತಿ ಅನುದಾನವನ್ನು ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಊಟೋಪಚಾರಕ್ಕೆ ಬಳಕೆ ಮಾಡಲು ಸರ್ಕಾರ ಮುಂದಾಗಿರುವುದಕ್ಕೆ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಜಿಲ್ಲೆಯ ಇತರೆ ಮೂವರು ಶಾಸಕರೊಂದಿಗೆ ಸುದ್ದಿಗೋಷ್ಟಿ ನಡೆಸಿ, ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಾದ ಹಣವನ್ನು ರಾಜಕೀಯ ಕಾರ್ಯಕ್ರಮಗಳಿಗೆ ಬಳಸುವುದು ಸರಿಯಲ್ಲ. ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನರ ಮೂಲಭೂತ ಸೌಕರ್ಯಗಳಿಗಾಗಿ ಬಳಕೆಯಾಗಬೇಕಾದ ಪಂಚಾಯಿತಿ ಅನುದಾನವನ್ನು ಗ್ಯಾರಂಟಿ ಸಮಾವೇಶದ ಊಟೋಪಚಾರಕ್ಕೆ ಬಳಸುವಂತೆ ಸೂಚಿಸಿರುವುದು ತಪ್ಪು ಎಂದು ತಿಳಿಸಿದ್ದಾರೆ.
ಈ ಕುರಿತು ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಸರ್ಕಾರದ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ನ.17ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು, ನ.24ರಂದು ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಆಯೋಜಿಸಲು ಸೂಚಿಸಿದ್ದಾರೆ.ಸಮಾವೇಶಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳನ್ನು ಕರೆತರುವುದರ ಜತೆಗೆ ಊಟೋಪಚಾರದ ವ್ಯವಸ್ಥೆಗೂ ತಗಲುವ ವೆಚ್ಚವನ್ನು ಆಯಾ ಗ್ರಾಮ ಪಂಚಾಯಿತಿಗಳ ಸ್ವಂತ ನಿಧಿಯಿಂದ ಭರಿಸುವಂತೆ ಸೂಚಿಸಲಾಗಿದೆ. ಇದಕ್ಕೆ ಗರಿಷ್ಠ 25 ಸಾವಿರ ರೂ. ಮಿತಿ ನಿಗದಿಪಡಿಸಲಾಗಿದೆ.ಈಗಾಗಲೇ ಅನುದಾನದ ಕೊರತೆಯಿಂದಾಗಿ ಹಲವು ಗ್ರಾಮ ಪಂಚಾಯಿತಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗುವ ಅನುದಾನವೂ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ.ಕುಡಿಯುವ ನೀರಿನ ಸಮಸ್ಯೆ, ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆ ಮತ್ತು ಚರಂಡಿಗಳ ನಿರ್ವಹಣೆ ಸೇರಿದಂತೆ ತುರ್ತು ಮೂಲಸೌಕರ್ಯ ಕಾಮಗಾರಿಗಳಿಗೆ ಪಂಚಾಯಿತಿಗಳು ಅನುದಾನದ ಕೊರತೆ ಎದುರಿಸುತ್ತಿವೆ.
ಇಂತಹ ಪರಿಸ್ಥಿತಿಯಲ್ಲಿ ಪಂಚಾಯಿತಿಗಳ ಸೀಮಿತ ಸ್ವಂತ ನಿಧಿಯನ್ನು ಫಲಾನುಭವಿಗಳ ಸಮಾವೇಶದ ಊಟೋಪಚಾರಕ್ಕೆ ಬಳಸುವಂತೆ ಸೂಚಿಸಿರುವುದು ಜನರ ಮೂಲಭೂತ ಅಗತ್ಯಗಳಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಜನಪ್ರತಿನಿಧಿಗಳೊಂದಿಗೆ ಯಾವುದೇ ಚರ್ಚೆ ನಡೆಸದೆ, ಮಾಹಿತಿ ನೀಡದೆ ಏಕಪಕ್ಷೀಯವಾಗಿ ಈ ಆದೇಶ ಹೊರಡಿಸಿರುವುದು ಆಕ್ಷೇಪಾರ್ಹ. ಗ್ರಾಮ ಪಂಚಾಯಿತಿಗಳು ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಜಾಪ್ರಭುತ್ವದ ತಳಮಟ್ಟದ ಸಂಸ್ಥೆಗಳಾಗಿವೆ. ಅವುಗಳ ಅನುದಾನವನ್ನು ಸ್ಥಳೀಯ ಅಭಿವೃದ್ಧಿ ಮತ್ತು ಜನರ ಅಗತ್ಯಗಳಿಗೆ ಬಳಸಬೇಕೇ ಹೊರತು ಇಂತಹ ಸಮಾವೇಶಗಳ ಖರ್ಚಿಗೆ ಬಳಸಬಾರದು. ಆದ್ದರಿಂದ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ , ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ,ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here