Monday, November 23, 2026

ಪರಶುರಾಮ ಥೀಂ ಪಾರ್ಕ್ ಗಾಗಿ ಬೆಂಗಳೂರಿನಿಂದ ಬೃಹತ್ ವಾಹನ ರ‌್ಯಾಲಿ: ನ.22ರಂದು ಬೈಲೂರಿನಲ್ಲಿ ಜನಾಗ್ರಹ ಸಭೆ

Must read

ಉಡುಪಿ: ಬೈಲೂರಿನ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಂ ಪಾರ್ಕ್ ಅನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸುವಂತೆ ಆಗ್ರಹಿಸಿ ನವೆಂಬರ್ 22ರಂದು ಬೆಂಗಳೂರಿನಿಂದ ಬೈಲೂರಿಗೆ ಬೃಹತ್ ವಾಹನ ರ‌್ಯಾಲಿ ಹಾಗೂ ಜನಾಗ್ರಹ ಸಭೆ ಹಮ್ಮಿಕೊಳ್ಳಲಾಗಿದೆ.
ಪರಶುರಾಮ ಥೀಂ ಪಾರ್ಕ್ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಈ ಹೋರಾಟಕ್ಕೆ ಮುಂದಾಗಿರುವುದಾಗಿ ಕಾರ್ಕಳ ಪರಶುರಾಮ ಥೀಂ ಪಾರ್ಕ್ ಜನಾಗ್ರಹ ಸಮಿತಿಯ ಸಂಚಾಲಕ ಸಚ್ಚಿದಾನಂದ ತಿಳಿಸಿದ್ದಾರೆ.
ಅಂದು ಬೆಳಗ್ಗೆ ಬೆಂಗಳೂರಿನಿಂದ ವಾಹನ ರ‌್ಯಾಲಿ ಆರಂಭವಾಗಲಿದ್ದು, ಮಧ್ಯಾಹ್ನ 3 ಗಂಟೆಗೆ ಬೈಲೂರಿನಲ್ಲಿ ಜನಾಗ್ರಹ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕಾರ್ಕಳವನ್ನು ಪ್ರವಾಸೋದ್ಯಮದ ಭೂಪಟದಲ್ಲಿ ಗುರುತಿಸುವ ಉದ್ದೇಶದಿಂದ ಶಾಸಕ ವಿ. ಸುನಿಲ್ ಕುಮಾರ್ ರೂಪಿಸಿದ್ದ ಮಹತ್ವಾಕಾಂಕ್ಷಿ ಯೋಜನೆ ಕಳೆದ ನಾಲ್ಕು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ತನಿಖೆಯ ಹೆಸರಿನಲ್ಲಿ ಸರ್ಕಾರ ಕಾಲಹರಣ ಮಾಡುತ್ತಿದ್ದು, ಯೋಜನೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ನಾಯಕರ ರಾಜಕೀಯ ಸ್ವಾರ್ಥ ಮತ್ತು ದ್ವೇಷದ ಕಾರಣದಿಂದ ಕಾರ್ಕಳದ ಪ್ರವಾಸೋದ್ಯಮ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ಯೋಜನೆಯಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ಆರ್ಥಿಕ ಪ್ರಗತಿಗೆ ಅವಕಾಶವಿತ್ತು. ಆದರೆ ಅಭಿವೃದ್ಧಿ ಯೋಜನೆಯನ್ನು ವಿವಾದದ ಕೇಂದ್ರವನ್ನಾಗಿ ಮಾಡಿ ಮೂಲೆಗುಂಪು ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
ಈ ಹಿಂದೆ ಹಲವು ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ಮಹಾಮಸ್ತಕಾಭಿಷೇಕಕ್ಕೂ ಮುನ್ನ ಥೀಂ ಪಾರ್ಕ್ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಬೇಕು ಎಂಬುದು ಸಮಿತಿಯ ಪ್ರಮುಖ ಆಗ್ರಹವಾಗಿದೆ.
ಯೋಜನೆ ವಿವಾದಕ್ಕೆ ಕಾರಣವೇನು, ನಾಲ್ಕು ವರ್ಷಗಳಿಂದ ತನಿಖೆ ಪೂರ್ಣಗೊಳಿಸದೆ ವಿಳಂಬ ಮಾಡುತ್ತಿರುವುದೇಕೆ ಹಾಗೂ ಕಾರ್ಕಳದ ಪ್ರವಾಸೋದ್ಯಮಕ್ಕೆ ಆಗಿರುವ ನಷ್ಟಕ್ಕೆ ಹೊಣೆ ಯಾರು ಎಂಬುದಕ್ಕೆ ಸರ್ಕಾರ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ನವೆಂಬರ್ 22ರ ಜನಾಗ್ರಹ ಸಭೆಯ ಮೂಲಕ ಸರ್ಕಾರದ ಮೇಲೆ ಜನಶಕ್ತಿಯ ಒತ್ತಡ ತರಲಾಗುವುದು. ಸಾರ್ವಜನಿಕರ ಪ್ರವೇಶಕ್ಕೆ ಪಾರ್ಕ್ ಅನ್ನು ತಕ್ಷಣ ಮುಕ್ತಗೊಳಿಸದಿದ್ದರೆ ಹೋರಾಟವನ್ನು ರಾಜ್ಯಾದ್ಯಂತ ತೀವ್ರಗೊಳಿಸಲಾಗುವುದು. ಕಾರ್ಕಳದ ಅಭಿವೃದ್ಧಿ ಮತ್ತು ಸಾರ್ವಜನಿಕರ ಹಿತಾಸಕ್ತಿಗಾಗಿ ನಡೆಯುವ ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಚ್ಚಿದಾನಂದ ಮನವಿ ಮಾಡಿದ್ದಾರೆ.

spot_img

More articles

LEAVE A REPLY

Please enter your comment!
Please enter your name here