Thursday, September 17, 2026

ಲೋಕಕಲ್ಯಾಣಕ್ಕಾಗಿ ಫೆಬ್ರವರಿಯಲ್ಲಿ ಪಡು ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಹಸ್ರ ಚಂಡಿಕಾಯಾಗ

Must read

ಉಡುಪಿ: ಪಡು ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲೋಕಕಲ್ಯಾಣ, ದೇಶದ ಸುಭಿಕ್ಷೆ ಹಾಗೂ ಗ್ರಾಮ–ರಾಷ್ಟ್ರಗಳ ಕ್ಷೇಮಕ್ಕಾಗಿ ಫೆಬ್ರವರಿಯಲ್ಲಿ ಸಹಸ್ರ ಚಂಡಿಕಾಯಾಗ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಕೃಷ್ಣರಾಜ್ ಭಟ್ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಸೆ.18ರಂದು ಸಂಜೆ 6.30ಕ್ಕೆ ದೇವಸ್ಥಾನದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಅದಮಾರು ಮಠದ ವಿಶ್ವಪ್ರಿಯತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಗಣ್ಯರ ಸಮ್ಮುಖದಲ್ಲಿ ಯಾಗದ ಮನವಿ ಪತ್ರ ಬಿಡುಗಡೆ ಮಾಡಲಾಗುವುದು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರದಲ್ಲಿ ಪ್ರತೀ ಹುಣ್ಣಿಮೆಯ ಆರಾಧನಾ ಪೂಜೆ, ಸಂಕ್ರಾಂತಿ ಪೂಜೆ, ಸೀಯಾಳಾಭಿಷೇಕ, ಸಿಂಹಮಾಸದ ಹೂವಿನ ಪೂಜೆ, ನವರಾತ್ರಿಯ ಚಂಡಿಕಾಹೋಮ, ಕಾರ್ತಿಕ ದೀಪೋತ್ಸವ ಹಾಗೂ ವಾರ್ಷಿಕ ಮಹಾರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಸೇವೆಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
2020ರಲ್ಲಿ ಭಕ್ತರ ಸಹಕಾರದಿಂದ ನವೀಕರಣ ಬ್ರಹ್ಮಕಲಶಾಭಿಷೇಕ ಹಾಗೂ ಶತಚಂಡಿಕಾಯಾಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಬಳಿಕ ಪ್ರತಿವರ್ಷ ನವಚಂಡಿಕಾಯಾಗ, ಶತಚಂಡಿಕಾಯಾಗ, ಲಕ್ಷ ಪ್ರದಕ್ಷಿಣೆ, ಲಕ್ಷ ಕುಂಕುಮಾರ್ಚನೆ, ಸಹಸ್ರ ಸೀಯಾಳಾಭಿಷೇಕ ಹಾಗೂ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಯಾಗ ಸಮಿತಿ ಅಧ್ಯಕ್ಷ ಡಾ. ಲಕ್ಷ್ಮೀ ಪ್ರಸಾದ್, ಉಪಾಧ್ಯಕ್ಷೆ ನಿಖಿತಾ, ಅರ್ಚಕ ದೇವಿ ಪ್ರಸನ್ನ ಹಾಗೂ ಕಾರ್ಯದರ್ಶಿ ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here