ಉಡುಪಿ: ಮನೆ ಹಾಗೂ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಆರೋಪದ ಮೇಲೆ ಇಬ್ಬರನ್ನು ಅಮಾಸೆಬೈಲು ಹಾಗೂ ಶಂಕರನಾರಾಯಣ ಪೊಲೀಸರು ಬಂಧಿಸಿದ್ದು, ಅವರಿಂದ ₹1,19,720 ನಗದು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ತಾಲ್ಲೂಕಿನ ಮಚ್ಚಟ್ಟು ಗ್ರಾಮದ ಜಾಂಬೂರು ಜೆಡ್ಡು–ನೆಲ್ಲಿಗದ್ದೆ ಎಂಬಲ್ಲಿ ಸೆ.4ರಂದು ಮನೆಯವರು ಕೆಲಸಕ್ಕೆ ತೆರಳಿದ್ದ ವೇಳೆ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ಕೋಣೆಯಲ್ಲಿದ್ದ ಬಟ್ಟೆಗಳನ್ನು ಚಲ್ಲಾಪಿಲ್ಲಿ ಮಾಡಿ ಗೋದ್ರೇಜ್‌ನಲ್ಲಿದ್ದ ಪೇಪರ್‌ನಲ್ಲಿ ಸುತ್ತಿಟ್ಟಿದ್ದ ₹97 ಸಾವಿರ ನಗದನ್ನು ಕಳವು ಮಾಡಿದ್ದರು. ಈ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ವೇಳೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕುಳ್ಳುಂಜೆ ಗ್ರಾಮದ ಮುಂಡುಕೋಡು ಶ್ರೀ ಜಲದುರ್ಗಾ ಪರಮೇಶ್ವರಿ ದೇವಸ್ಥಾನದ ಕಾಣಿಕೆ ಹುಂಡಿ ಒಡೆದು ₹35ರಿಂದ ₹40 ಸಾವಿರ ಹಣ ಕಳವು ಮಾಡಿದ್ದ ಪ್ರಕರಣವೂ ದಾಖಲಾಗಿತ್ತು.
ಎರಡೂ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಸಂಡಾ ಅಂಚೆ ವ್ಯಾಪ್ತಿಯ ಎತ್ತಿನಹಳ್ಳಿ ಪುಣೆದಹಳ್ಳಿ ಗ್ರಾಮದ ರಾಕೇಶ್ ಎಚ್. (28) ಹಾಗೂ ಜಕ್ಕೆನಹಳ್ಳಿ ಗ್ರಾಮದ ನಂದೀಶ ಎಂ. (24) ಅವರನ್ನು ಹುಲಿಕಲ್ ಘಾಟ್ ಸಮೀಪ ಬಂಧಿಸಿದ್ದಾರೆ.
ಬಂಧಿತರಿಂದ ಕಳವು ಮಾಡಿದ್ದ ₹1,19,720 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಣಿ ನೇತೃತ್ವದಲ್ಲಿ ಅಮಾಸೆಬೈಲು ಠಾಣೆಯ ಪಿಎಸ್‌ಐ ಭೀಮಾಶಂಕರ್ ಸಿನ್ನೂರ್, ಶಂಕರನಾರಾಯಣ ಠಾಣೆಯ ಪಿಎಸ್‌ಐ ಯೂನಸ್ ಗಡ್ಕೆಕರ್, ಅಮಾಸೆಬೈಲು ಠಾಣೆಯ ಪಿಎಸ್‌ಐ ಸುಧಾರಾಣಿ ಟಿ. ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

