ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅ.11ರಿಂದ 21ರವರೆಗೆ ನಡೆಯಲಿರುವ ಐದನೇ ವರ್ಷದ ಉಡುಪಿ–ಉಚ್ಚಿಲ ದಸರಾ–2026ರ ಆಮಂತ್ರಣ ಪತ್ರಿಕೆಯನ್ನು ಸಂಘದ ಗೌರವ ಸಲಹೆಗಾರ ನಾಡೋಜ ಜಿ. ಶಂಕರ್ ಭಾನುವಾರ ಬಿಡುಗಡೆಗೊಳಿಸಿದರು.
ಆಮಂತ್ರಣ ಪತ್ರಿಕೆ ಬಿಡುಗಡೆ ಬಳಿಕ ಮಾತನಾಡಿದ ಜಿ. ಶಂಕರ್ ಅವರು, ತಾಯಿ ಮಹಾಲಕ್ಷ್ಮೀಯ ಆಶೀರ್ವಾದದಿಂದ ಈ ಬಾರಿಯ ದಸರಾ ಅಚ್ಚುಕಟ್ಟಾಗಿ ನಡೆಯಲಿದೆ. ದಾಂಡಿಯಾ, ಕುಣಿತ ಭಜನೆ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ಬಾರಿಯೂ ಗಮನ ಸೆಳೆಯಲಿವೆ. ವಿಶೇಷತೆಗಳೊಂದಿಗೆ ದಸರಾ ಮೆರವಣಿಗೆಯೂ ನಡೆಯಲಿದೆ ಎಂದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ನಾಡೋಜ ಜಿ. ಶಂಕರ್ ಅವರ ಮಾರ್ಗದರ್ಶನದಲ್ಲಿ ದಸರಾ ಕಾರ್ಯಕ್ರಮ ರೂಪಿಸಲಾಗಿದೆ. ಈ ಬಾರಿ ಯುವದಸರಾ, ವಸ್ತು ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಘದ ಆಡಳಿತ ಮಂಡಳಿ ನಿರ್ಧರಿಸಿದೆ. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡ ಅ.20ರಂದು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದೆ. ಪರಿಣತ ದಾಂಡಿಯಾ ತಂಡವೂ ಪ್ರದರ್ಶನ ನೀಡಲಿದೆ ಎಂದು ತಿಳಿಸಿದರು.
ಮೊಗವೀರ ಸಮಾಜದ ಗುರುಗಳನ್ನು ಪರಿಚಯಿಸುವ ಉದ್ದೇಶದಿಂದ ಸಮಾಜದ ಹಿರಿಯರು ಹಾಗೂ ಗುರಿಕಾರರ ಮಾರ್ಗದರ್ಶನದಲ್ಲಿ ಗುರುಗಳ ಪ್ರತಿಮೆ ನಿರ್ಮಿಸಲಾಗುತ್ತಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸುವಂತೆ ಮನವಿ ಮಾಡಿದರು.
ಸೆ.25ರಂದು 31 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ
ಮೊಗವೀರ ಸಮಾಜದ 9ನೇ ಕುಲಗುರು ಮಾಧವ ಮಂಗಲ ಪೂಜಾರ್ಯರ 31 ಅಡಿ ಎತ್ತರದ ಕುಳಿತ ಭಂಗಿಯ ಕಂಚಿನ ಪ್ರತಿಮೆ ಸುಮಾರು ₹3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಸೆ.25ರಂದು ಬೆಳಿಗ್ಗೆ 10 ಗಂಟೆಗೆ ಅನಾವರಣಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರತಿಮೆ ಅನಾವರಣಗೊಳಿಸಲಿದ್ದಾರೆ.
ಅ.11ರಂದು ಮುಜರಾಯಿ ಇಲಾಖೆ ಸಚಿವ ಬಸವಂತಪ್ಪ ಅವರು ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ದ.ಕ. ಮೊಗವೀರ ಮಹಾಜನ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಶ್ರೀ ಕ್ಷೇತ್ರ ಉಚ್ಚಿಲ ಆಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಸುವರ್ಣ ಸತೀಶ್ ಕುಂದರ್ ಮಲ್ಪೆ, ಗುಂಡು ಬಿ. ಅಮೀನ್ ಕಿದಿಯೂರು. ವಾಸುದೇವ ಸಾಲ್ಯಾನ್ ಕಟಪಾಡಿ. ರತ್ನಾಕರ ಸಾಲ್ಯಾನ್, ಮನೋಜ್ ಸಾಲ್ಯಾನ್, ರವೀಶ್ ಕೊರವಡಿ, ದಿನೇಶ್ ಎರ್ಮಾಳ್. ಕಿರಣ್ ಕುಮಾರ್ ಪಿತ್ರೋಡಿ. ವಿಶ್ವಾಸ್ ಅಮೀನ್, ದೇವಳದ ಅರ್ಚಕ ರಾಘವೇಂದ್ರ ಉಪಾಧ್ಯಾಯ. ರಾಜೇಂದ್ರ ಸುವರ್ಣ ಹಿರಿಯಡ್ಕ, ಮನೋಜ್ ಕಾಂಚನ್, ಸುಗುಣ ಎಸ್. ಕರ್ಕೇರ. ವಿಜಯ ಸುವರ್ಣ ಬೆಂಗ್ರೆ. ನಾರಾಯಣ ಸಿ. ಕರ್ಕೇರ. ಮೋಹನ್ ಬಂಗೇರ ಕಾಪು. ಸತೀಶ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.

