Wednesday, September 16, 2026

ಪಶ್ಚಿಮಘಟ್ಟದಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಿ, ಕಾನೂನುಬದ್ಧ ನಿವಾಸಿಗಳ ರಕ್ಷಿಸಿ: ಜಯಕೃಷ್ಣ ಶೆಟ್ಟಿ

Must read

ಉಡುಪಿ: ಪಶ್ಚಿಮಘಟ್ಟಗಳಲ್ಲಿ ಅಕ್ರಮ ಭೂ ಒತ್ತುವರಿ, ಭೂ ಕಬಳಿಕೆ ಹಾಗೂ ನಕಲಿ ದಾಖಲೆ ಸೃಷ್ಟಿಯಂತಹ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಹಲವು ವರ್ಷಗಳಿಂದ ಕಾನೂನುಬದ್ಧವಾಗಿ ವಾಸಿಸುತ್ತಿರುವ ಗ್ರಾಮಸ್ಥರು, ರೈತರು ಹಾಗೂ ಖಾಸಗಿ ಆಸ್ತಿ ಮಾಲೀಕರಿಗೆ ಅನ್ಯಾಯವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಸರ್ಕಾರಿ ಭೂಮಿ ಒತ್ತುವರಿ, ನಕಲಿ ದಾಖಲೆ ಸೃಷ್ಟಿ, ವಂಚನೆ ಅಥವಾ ಬೆದರಿಕೆ ಮೂಲಕ ಭೂ ಕಬಳಿಕೆ, ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಸಂಘಟಿತ ಭೂ ಕಬಳಿಕೆ ತನಿಖೆಯಲ್ಲಿ ದೃಢಪಟ್ಟರೆ ಅಂತಹ ಪ್ರಕರಣಗಳನ್ನು ಕಾನೂನು ಜಾರಿ ಸಂಸ್ಥೆಗಳಿಗೆ ಒಪ್ಪಿಸಿ, ಅಗತ್ಯವಿದ್ದಲ್ಲಿ ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ವೈಜ್ಞಾನಿಕ ಪರಿಶೀಲನೆ ಅಗತ್ಯ: ಅರಣ್ಯ ಮತ್ತು ಕಂದಾಯ ಇಲಾಖೆಗಳು ಸಮನ್ವಯದಿಂದ ಹಳೆಯ ದಾಖಲೆಗಳು, ಮಾಲೀಕತ್ವ ಹಾಗೂ ಭೂಬಳಕೆ ವಿವರಗಳು, ಉಪಗ್ರಹ ಚಿತ್ರಗಳು ಮತ್ತು ಸ್ಥಳ ಪರಿಶೀಲನೆ ಆಧರಿಸಿ ಅಕ್ರಮ ಒತ್ತುವರಿಯನ್ನು ಗುರುತಿಸಬೇಕು. ಕೇವಲ ಉಪಗ್ರಹ ಚಿತ್ರವೊಂದನ್ನೇ ಅಂತಿಮ ಸಾಕ್ಷಿಯಾಗಿ ಪರಿಗಣಿಸಿ ತೆರವು ಅಥವಾ ದಂಡಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ಅವರು ಹೇಳಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶ (FSA) ವ್ಯಾಪ್ತಿಯಲ್ಲಿದೆ ಎಂಬ ಒಂದೇ ಕಾರಣಕ್ಕೆ ಅಲ್ಲಿನ ಪ್ರತಿಯೊಬ್ಬ ಗ್ರಾಮಸ್ಥ, ರೈತ ಅಥವಾ ಖಾಸಗಿ ಆಸ್ತಿ ಮಾಲೀಕರನ್ನು ಅಕ್ರಮ ಒತ್ತುವರಿದಾರರೆಂದು ಪರಿಗಣಿಸುವುದು ಸರಿಯಲ್ಲ. ಹಳೆಯ ಗ್ರಾಮಗಳು, ಕಾನೂನುಬದ್ಧ ಕೃಷಿಭೂಮಿ, ಮಾನ್ಯ ಖಾಸಗಿ ಆಸ್ತಿ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಮಾನ್ಯವಾಗಿರುವ ಹಕ್ಕುಗಳನ್ನು ನೈಜ ಅಕ್ರಮ ಒತ್ತುವರಿಯಿಂದ ಪ್ರತ್ಯೇಕಿಸಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪಾರದರ್ಶಕ ವ್ಯವಸ್ಥೆಗೆ ಸಲಹೆ: ಉಪಗ್ರಹ ಚಿತ್ರಗಳ ಮೂಲಕ ಭೂಬಳಕೆ ಬದಲಾವಣೆ ಗುರುತಿಸುವುದು, ಕಂದಾಯ–ಅರಣ್ಯ ದಾಖಲೆ ಪರಿಶೀಲನೆ, ಸ್ಥಳ ಪರಿಶೀಲನೆ ಹಾಗೂ ಅಕ್ರಮ ದೃಢಪಟ್ಟಲ್ಲಿ ಪೊಲೀಸ್ ಮತ್ತು ಕಾನೂನು ಕ್ರಮ ಕೈಗೊಳ್ಳುವಂತಹ ಪಾರದರ್ಶಕ ವ್ಯವಸ್ಥೆ ರೂಪಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.
ಕಸ್ತೂರಿರಂಗನ್ ವರದಿ ಹಾಗೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಕ್ರಮ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ, ಹಲವು ವರ್ಷಗಳಿಂದ ನೆಲೆಸಿರುವ ನಾಗರಿಕರು ತೆರವು ಭೀತಿಗೆ ಒಳಗಾಗಿರುವುದು ಕಳವಳಕಾರಿ. ಪರಿಸರ ಸಂರಕ್ಷಣೆ ಅಗತ್ಯವಾದರೂ ಅದರ ಹೆಸರಿನಲ್ಲಿ ಕಾನೂನುಬದ್ಧವಾಗಿ ಬದುಕುತ್ತಿರುವ ಜನರಿಗೆ ಅನ್ಯಾಯವಾಗಬಾರದು ಎಂದು ಜಯಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ತೆರವುಗೂ ಮುನ್ನ ಪ್ರತಿಯೊಬ್ಬ ನಿವಾಸಿಯ ದಾಖಲೆ, ಹಕ್ಕು ಹಾಗೂ ವಾಸದ ಇತಿಹಾಸವನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು. ಅರ್ಹರಿಗೆ ಕಾನೂನುಬದ್ಧ ರಕ್ಷಣೆ, ಪರ್ಯಾಯ ವಸತಿ ಹಾಗೂ ಅಗತ್ಯವಿದ್ದಲ್ಲಿ ಪುನರ್ವಸತಿ ಕಲ್ಪಿಸಬೇಕು. ಪಶ್ಚಿಮಘಟ್ಟ ಸಂರಕ್ಷಣೆಯ ಜತೆಗೆ ಸಾಮಾಜಿಕ ನ್ಯಾಯ ಮತ್ತು ಕಾನೂನುಬದ್ಧ ಆಸ್ತಿ ಹಕ್ಕುಗಳ ರಕ್ಷಣೆಯೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

spot_img

More articles

LEAVE A REPLY

Please enter your comment!
Please enter your name here