Wednesday, August 19, 2026

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ನಾಗರ ಪಂಚಮಿ: ನಾಗದೇವರಿಗೆ ತನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಕೆ

Must read

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗಿನಿಂದಲೇ ನಾಗರಕಟ್ಟೆ, ನಾಗಬನ ಹಾಗೂ ನಾಗದೇವರ ಸನ್ನಿಧಿಗಳಿಗೆ ತೆರಳಿದ ಭಕ್ತರು ನಾಗಮೂರ್ತಿಗಳಿಗೆ ತನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ನಾಗಮೂರ್ತಿಗಳಿಗೆ ಅರಶಿನ, ಕುಂಕುಮ ಹಚ್ಚಿ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಸಮರ್ಪಿಸಿದ ಎಳನೀರು ಹಾಗೂ ಹಾಲಿನಿಂದ ನಾಗದೇವರಿಗೆ ಅಭಿಷೇಕ ನೆರವೇರಿಸಲಾಯಿತು. ಹಿಂಗಾರ, ಕೇದಗೆ ಸೇರಿದಂತೆ ವಿವಿಧ ಹೂಗಳಿಂದ ನಾಗಮೂರ್ತಿಗಳನ್ನು ಸಿಂಗರಿಸಲಾಗಿತ್ತು. ಮಂಗಳಾರತಿಯ ಬಳಿಕ ಭಕ್ತರಿಗೆ ಹಿಂಗಾರದ ಪ್ರಸಾದ ವಿತರಿಸಲಾಯಿತು.
ಜಿಲ್ಲೆಯ ವಿವಿಧ ನೈಸರ್ಗಿಕ ನಾಗಬನಗಳು ಹಾಗೂ ನಾಗದೇವರ ದೇವಸ್ಥಾನಗಳು ಬೆಳಗ್ಗಿನಿಂದಲೇ ಭಕ್ತರಿಂದ ತುಂಬಿದ್ದವು. ಹೂವು, ಹಣ್ಣು, ಪಿಂಗಾರ, ಕೇದಗೆ, ಕ್ಷೀರ ಹಾಗೂ ಎಳನೀರಿನೊಂದಿಗೆ ಭಕ್ತರು ನಾಗದೇವರಿಗೆ ತನು ಅರ್ಪಿಸಿದರು.

ಉಡುಪಿಯ ಬನ್ನಂಜೆ, ಗುಂಡಿಬೈಲು ಹಾಗೂ ಮಾರ್ಪಳ್ಳಿ ನಾಗಬನಗಳಲ್ಲಿ ವಿಶೇಷ ಪೂಜೆ ನಡೆಯಿತು. ಕಡೇಕಾರು ಶ್ರೀ ಲಕ್ಷ್ಮೀನಾರಾಯಣ ಮಠದ ನಾಗದೇವರ ಸನ್ನಿಧಿಯಲ್ಲೂ ವಿಶೇಷ ಪೂಜೆ ನೆರವೇರಿತು. ಬ್ರಹ್ಮಗಿರಿ ವೃತ್ತದ ಬಳಿಯ ನಾಗದೇವರ ದೇವಸ್ಥಾನ, ದೊಡ್ಡಣಗುಡ್ಡೆಯ ಸಗ್ರಿ ನೈಸರ್ಗಿಕ ನಾಗಬನ, ತಾಂಗೋಡು, ಮಾಂಗೋಡು, ಮುಚ್ಚುಕೋಡು, ಅರಿತೋಡು ಹಾಗೂ ಸರಳೇಬೆಟ್ಟು ಕೋಡಿಯ ನಾಗಬ್ರಹ್ಮಸ್ಥಾನಗಳಲ್ಲಿ ನಾಗಪೂಜೆ ನಡೆಯಿತು.
ಮಣಿಪಾಲದ ಮಂಚಿಕೆರೆಯ ಶ್ರೀ ವಾಸುಕಿ ನಾಗಯಕ್ಷೀ ಸನ್ನಿಧಾನ, ಮಹತೋಬಾರ ಕೊಡವೂರು ಶಂಕರನಾರಾಯಣ ದೇವಸ್ಥಾನ, ಕಕ್ಕುಂಜೆ ಇಷ್ಟಸಿದ್ಧಿ ವಿನಾಯಕ ದೇವಸ್ಥಾನ, ಇಂದ್ರಾಳಿಯ ನಾಗಬನ ಹಾಗೂ ಮಣಿಪಾಲದ ಸರಳೇಬೆಟ್ಟು ಉಮಾಮಹೇಶ್ವರ ದೇವಸ್ಥಾನಗಳಲ್ಲಿ ನಾಗರ ಪಂಚಮಿ ಅಂಗವಾಗಿ ವಿಶೇಷ ಪೂಜೆಗಳು ಜರುಗಿದವು.
ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಾಗದೇವರಿಗೆ ವಿಶೇಷ ಅಲಂಕಾರ ಪೂಜೆ ನಡೆಯಿತು. ಕುಂಜಿಬೆಟ್ಟು ಸಗ್ರಿ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ನಾಗರ ಪಂಚಮಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆಗಳು ನೆರವೇರಿದವು.

spot_img

More articles

LEAVE A REPLY

Please enter your comment!
Please enter your name here