ಉಡುಪಿ: ಯುವಕರಿಗೆ ಕೆಟ್ಟ ಪದಗಳನ್ನು ಕಲಿಸಿರುವುದೇ ಬಿಜೆಪಿಯ ಐಟಿ ಸೆಲ್. ಸತ್ಯ ಹೇಳುವವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಬಿಜೆಪಿ ಸಿದ್ಧಾಂತದ ವಿರುದ್ಧ ಮಾತನಾಡುವವರ ತೇಜೋವಧೆ ಮಾಡುವುದು ಬಿಜೆಪಿ ಐಟಿ ಸೆಲ್ ನ ಕೆಲಸ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಸಚಿವ ರಿಜ್ವಾನ್ ಅರ್ಷದ್ ಆರೋಪಿಸಿದರು.
ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ನಗರದ ಎಲ್‌ಐಸಿ ಡೈಮಂಡ್ ಜ್ಯುಬಿಲಿ ಹಾಲ್‌ನಲ್ಲಿ ಶನಿವಾರ ನಡೆದ 51ನೇ ವಾರ್ಷಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಈಗ ನಿಮ್ಮ ಐಟಿ ಸೆಲ್‌ನಿಂದಲೇ ಕಲಿತ ಭಾಷೆಯಲ್ಲಿ ಯುವಕರು ನಿಮ್ಮನ್ನು ಟೀಕಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ತಮ್ಮ ಪಕ್ಷದ ಐಟಿ ಸೆಲ್ ಅನ್ನು ವಿಚಾರಿಸಬೇಕು. ಯಾರ ಮಾನಹಾನಿ ಮಾಡಬಾರದು, ಯಾರಿಗೂ ಅಗೌರವ ತೋರಬಾರದು ಎಂಬ ಸೂಚನೆ ನೀಡಬೇಕು’ ಎಂದು ಹೇಳಿದರು.
‘ಹದಿಹರೆಯದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿ, ಅವರ ಮೇಲೆಯೇ ಪ್ರಕರಣ ದಾಖಲಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇಂತಹ ದುರ್ಬಲ ನಾಯಕತ್ವ, ಸರ್ಕಾರ ಹಾಗೂ ಪಕ್ಷವನ್ನು ನಾನು ನೋಡಿಲ್ಲ’ ಎಂದು ರಿಜ್ವಾನ್ ಅರ್ಷದ್ ಟೀಕಿಸಿದರು.
ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರಿಪ್ರಸಾದ್ ರೈ, ದಿನೇಶ್ ಹೆಗ್ಡೆ ಮೊಳಹಳ್ಳಿ, ರಾಜು ಪೂಜಾರಿ, ಕೃಷ್ಣ ಶೆಟ್ಟಿ ಬಜಗೋಳಿ ಮೊದಲಾದವರು ಉಪಸ್ಥಿತರಿದ್ದರು.
ಯುವಕರಿಗೆ ಕೆಟ್ಟ ಪದ ಕಲಿಸಿದ್ದೇ ಬಿಜೆಪಿ ಐಟಿ ಸೆಲ್- ಸಚಿವ ರಿಜ್ವಾನ್
More articles

