Sunday, August 16, 2026

ಪಾರ್ಶ್ವವಾಯು ಪೀಡಿತನಿಗೆ ಜಿಲ್ಲಾಡಳಿತದ ಸ್ಪಂದನೆ ಇಲ್ಲ; ಐತಾಳ್ ದಂಪತಿಯಿಂದ ಮಾನವೀಯ ನೆರವು

Must read

ಉಡುಪಿ: ಕಳೆದ ಮೂರು ತಿಂಗಳಿನಿಂದ ಆಶ್ರಯವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿರುವ ಪಾರ್ಶ್ವವಾಯು ಪೀಡಿತ ಕೇರಳ ಮೂಲದ ವ್ಯಕ್ತಿಗೆ ಜಿಲ್ಲಾಡಳಿತ ಸೂಕ್ತ ಸ್ಪಂದನೆ ನೀಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ಮೂವಾಟ್ಟುಪುಳ ನಿವಾಸಿ ರಾಯಲ್ ಪೌಲ್ (48) ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಆಶ್ರಯ ಹಾಗೂ ಚಿಕಿತ್ಸೆಗಾಗಿ ಪರದಾಡುತ್ತಿದ್ದರು. ಈ ಕುರಿತು ಮೂರು ತಿಂಗಳ ಹಿಂದೆ ಅವರನ್ನು ಆಂಬುಲೆನ್ಸ್‌ನಲ್ಲಿ ಕರೆತಂದು ಸುದ್ದಿಗೋಷ್ಠಿ ನಡೆಸಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ವಿಷಯ ತಿಳಿದ ಹೆಬ್ರಿಯ ರಾಘವೇಂದ್ರ ಆಸ್ಪತ್ರೆಯ ಡಾ. ಭಾರ್ಗವಿ ಐತಾಳ್ ಹಾಗೂ ಅವರ ಪತಿ ರಾಯಲ್ ಪೌಲ್ ಅವರಿಗೆ ಆಶ್ರಯ ಕಲ್ಪಿಸಿ, ಕಳೆದ ಮೂರು ತಿಂಗಳಿನಿಂದ ಉಚಿತವಾಗಿ ಚಿಕಿತ್ಸೆ ಹಾಗೂ ಶುಶ್ರೂಷೆ ಮಾಡುತ್ತಿದ್ದಾರೆ. ಅವರ ಆರೈಕೆಗೆ ತಿಂಗಳಿಗೆ ₹30 ಸಾವಿರಕ್ಕೂ ಅಧಿಕ ವೆಚ್ಚವಾಗುತ್ತಿದ್ದು, ದಂಪತಿ ಯಾವುದೇ ಶುಲ್ಕ ಪಡೆಯದೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
‘ನನ್ನನ್ನು ಊರಿಗೆ ಕರೆದೊಯ್ದು ನನ್ನವರೊಂದಿಗೆ ಬದುಕಲು ಅವಕಾಶ ಮಾಡಿಕೊಡಿ’ ಎಂದು ರಾಯಲ್ ಪೌಲ್ ಕಣ್ಣೀರಿಡುತ್ತಿದ್ದಾರೆ. ಅವರ ಆಧಾರ್‌ ಕಾರ್ಡ್‌ನಲ್ಲಿರುವ ವಿವರಗಳ ಆಧಾರದಲ್ಲಿ ಸಂಬಂಧಿಕರನ್ನು ಪತ್ತೆಹಚ್ಚಿ ಊರಿಗೆ ಕಳುಹಿಸುವ ಅಥವಾ ಸೂಕ್ತ ಆಶ್ರಯ ಕಲ್ಪಿಸುವ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳಬೇಕು ಎಂದು ವಿಶು ಶೆಟ್ಟಿ ಒತ್ತಾಯಿಸಿದರು.
ಐತಾಳ್ ದಂಪತಿ ಆಶ್ರಯ ನೀಡದಿದ್ದರೆ ರಾಯಲ್ ಪೌಲ್ ಮತ್ತೆ ಬೀದಿಪಾಲಾಗುವ ಸಾಧ್ಯತೆಯಿದೆ. ಆದ್ದರಿಂದ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ತುರ್ತು ಸ್ಪಂದಿಸಬೇಕು. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅಸಹಾಯಕ ವ್ಯಕ್ತಿಯ ಹಕ್ಕು ಹಾಗೂ ಗೌರವಯುತ ಬದುಕಿಗೆ ಅವಕಾಶ ಕಲ್ಪಿಸುವ ಮೂಲಕ ಸಂವಿಧಾನದ ಆಶಯವನ್ನು ಗೌರವಿಸಬೇಕು ಎಂದು ಅವರು ಆಗ್ರಹಿಸಿದರು.

spot_img

More articles

LEAVE A REPLY

Please enter your comment!
Please enter your name here