Thursday, October 15, 2026

ಉಡುಪಿ: ಯುಪಿಸಿಎಲ್ ಗುತ್ತಿಗೆ ಕಾಮಗಾರಿ ವಿಚಾರಕ್ಕೆ ಡೇವಿಡ್ ಡಿಸೋಜ ಹತ್ಯೆ- ಎಸ್ಪಿ ಹರಿರಾಮ್ ಶಂಕರ್

Must read

ಉಡುಪಿ: ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಡೇವಿಡ್ ಡಿಸೋಜ ಅವರ ಹತ್ಯೆ ಯುಪಿಸಿಎಲ್ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದ ಆರ್ಥಿಕ ವ್ಯವಹಾರದ ವೈಮನಸ್ಸಿನಿಂದ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹರಿರಾಮ್ ಶಂಕರ್ ತಿಳಿಸಿದರು.
ಆರೋಪಿಗಳ ಬಂಧನದ ಬಳಿಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೇವಿಡ್ ಅವರನ್ನು ಹತ್ಯೆಗೈಯಲು ಉತ್ತರ ಭಾರತದ ವ್ಯಕ್ತಿಯೊಬ್ಬರು ಸುಪಾರಿ ನೀಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಸುಪಾರಿ ನೀಡಿದವರ ಪತ್ತೆಗಾಗಿ ಈಗಾಗಲೇ ವಿಶೇಷ ತಂಡವನ್ನು ಹೊರರಾಜ್ಯಕ್ಕೆ ಕಳುಹಿಸಲಾಗಿದೆ ಎಂದರು.
ಹತ್ಯೆ ಪ್ರಕರಣದ ಎ1 ಆರೋಪಿ ಶೂಟರ್ ರಾಜು ಅವರ ಬ್ಯಾಂಕ್ ಖಾತೆಗೆ ₹2 ಲಕ್ಷಕ್ಕೂ ಹೆಚ್ಚು ಹಣ ಪಾವತಿಯಾಗಿದ್ದು, ಕೊಲೆಗೆ ಮುನ್ನ ಹಾಗೂ ನಂತರ ಹಂತ ಹಂತವಾಗಿ ಹಣ ವರ್ಗಾವಣೆಯಾಗಿದೆ. ರಾಜು 9 ಎಂಎಂ ಪಿಸ್ತೂಲಿನಿಂದ ಡೇವಿಡ್ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ಆರೋಪಿಯಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಮೂವರು ಆರೋಪಿಗಳ ಬಂಧನ:
ಆರೋಪಿಗಳನ್ನು ಬೈಂದೂರಿನ ಒತ್ತಿನೆಣೆ, ಭಟ್ಕಳ ಹಾಗೂ ಕುಮಟಾದಲ್ಲಿ ಬಂಧಿಸಲಾಗಿದೆ. ಘಟನೆ ಬಳಿಕ ಆರೋಪಿಗಳು ಉಡುಪಿ ಜಿಲ್ಲೆಯಿಂದ ಹೊರಹೋಗದಂತೆ ಜಿಲ್ಲೆಯ ಎಲ್ಲ ಗಡಿಭಾಗಗಳಲ್ಲಿ ನಾಕಾಬಂದಿ ನಡೆಸಲಾಗಿತ್ತು. ಉಡುಪಿ ಹಾಗೂ ಭಟ್ಕಳ ರೈಲು ನಿಲ್ದಾಣಗಳಲ್ಲಿಯೂ ತಪಾಸಣೆ ಬಿಗಿಗೊಳಿಸಲಾಗಿತ್ತು. ರೈಲ್ವೆ ಪೊಲೀಸರ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸರ ಸಹಕಾರ ಪಡೆಯಲಾಗಿತ್ತು. ಪ್ರಕರಣದ ತನಿಖೆಯಲ್ಲಿ 500ಕ್ಕೂ ಹೆಚ್ಚು ಪೊಲೀಸರು ಕಾರ್ಯನಿರ್ವಹಿಸಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಬೈಂದೂರಿನ ಒತ್ತಿನೆಣೆ ಬಳಿ ಬಸ್‌ಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಮೂವರು ವ್ಯಕ್ತಿಗಳು ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಕಾಪು ಠಾಣೆಯ ಪಿಎಸ್ಐ ತೇಜಸ್ವಿ ಅವರು ರಾಜುವನ್ನು ಬೆನ್ನಟ್ಟಿದರು. ಒತ್ತಿನೆಣೆ ಬಳಿ ರಾಜು ಪಿಎಸ್ಐ ಮೇಲೆ ಹಲ್ಲೆ ನಡೆಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಪಿಎಸ್ಐ ತೇಜಸ್ವಿ ಹಾಗೂ ಆರೋಪಿ ರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಇಬ್ಬರು ಆರೋಪಿಗಳನ್ನು ಶನಿವಾರ ಬೆಳಿಗ್ಗೆ ಭಟ್ಕಳ ಹಾಗೂ ಕುಮಟಾದಲ್ಲಿ ಬಂಧಿಸಲಾಗಿದೆ ಎಂದರು.
26 ಪ್ರಕರಣಗಳಲ್ಲಿ ಆರೋಪಿ:
ಎ1 ಆರೋಪಿ ರಾಜು ವಿರುದ್ಧ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳಲ್ಲಿ ಕೊಲೆ, ಮಹಿಳೆಯರ ಮೇಲೆ ಹಲ್ಲೆ, ದರೋಡೆ ಸೇರಿದಂತೆ 26 ಪ್ರಕರಣಗಳಿವೆ. ಎ2 ಆರೋಪಿ ಅನಮೋಲ್ ವಿರುದ್ಧ 2018ರ ಬಳಿಕ ನಾಲ್ಕು ರಾಜ್ಯಗಳಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ಜಿಯಾವುಲ್ ವಜುಲ್ ಶೇಖ್ ವಿರುದ್ಧ ದರೋಡೆ, ಶೂಟೌಟ್ ಹಾಗೂ ಡಕಾಯಿತಿ ಸೇರಿದಂತೆ 12 ಪ್ರಕರಣಗಳಿವೆ ಎಂದು ಎಸ್ಪಿ ಹೇಳಿದರು.
ಆರೋಪಿಗಳು ಎರ್ಮಾಳ್ ಬಳಿ ಬೈಕ್‌ವೊಂದನ್ನು ಬಿಟ್ಟು ಹೋಗಿದ್ದಾರೆ. ಬೈಕ್‌ ಒದಗಿಸಿದವರು ಯಾರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆರೋಪಿಗಳಿಂದ ಮೂರು ಮೊಬೈಲ್ ಫೋನ್‌ಗಳು ಹಾಗೂ ಸಿಮ್‌ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡೇವಿಡ್ ಡಿಸೋಜ ಗುತ್ತಿಗೆ ಕೆಲಸ ಮಾಡುತ್ತಿದ್ದರು. ಅಂದಾಜು ₹2ರಿಂದ ₹3 ಕೋಟಿ ಮೊತ್ತದ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಡೇವಿಡ್ ಹಾಗೂ ಮತ್ತೊಬ್ಬ ಗುತ್ತಿಗೆದಾರನ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರ ಹತ್ಯೆಗೆ ಪ್ರಮುಖ ಕಾರಣವಾಗಿರುವ ಸಾಧ್ಯತೆ ಇದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳು ಸುಮಾರು ಎರಡು ತಿಂಗಳ ಹಿಂದೆಯೇ ಸ್ಥಳಕ್ಕೆ ಬಂದು ಕೃತ್ಯಕ್ಕೆ ಸ್ಕೆಚ್ ಹಾಕಿದ್ದರು. ಆರೋಪಿಗಳಿಗೆ ಪರಸ್ಪರ ಸಂಪೂರ್ಣ ಪರಿಚಯವೂ ಇರಲಿಲ್ಲ. ಸುಳ್ಳು ಹೆಸರುಗಳನ್ನು ಹೇಳಿಕೊಂಡು ಪರಸ್ಪರ ಪರಿಚಯಿಸಿಕೊಂಡಿದ್ದರು. ಆರೋಪಿಗಳಿಗೆ ಸ್ಥಳೀಯವಾಗಿ ಯಾರೆಲ್ಲ ಸಹಾಯ ಮಾಡಿದ್ದಾರೆ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಹರಿರಾಮ್ ಶಂಕರ್ ತಿಳಿಸಿದರು.
ಆರೋಪಿಗಳು ತಪ್ಪಿಸಿಕೊಂಡಿದ್ದರೆ ಅವರ ಬಳಿಯಿದ್ದ ಮೊಬೈಲ್ ಫೋನ್‌ಗಳು ಪತ್ತೆಯಾಗುತ್ತಿರಲಿಲ್ಲ. ಮೊಬೈಲ್‌ಗಳ ಆಧಾರದ ಮೇಲೂ ತನಿಖೆ ನಡೆಸಲಾಗುತ್ತಿದೆ ಎಂದರು.

spot_img

More articles

LEAVE A REPLY

Please enter your comment!
Please enter your name here