ಉಡುಪಿ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿಸುವ ನೆಪದಲ್ಲಿ ₹70 ಲಕ್ಷ ಪಡೆದು ವಂಚನೆ ನಡೆಸಿದ ಹಾಗೂ ಬಳಿಕ ಹಣಕ್ಕಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ಮಹಿಳೆಯೊಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತೆಯನ್ನು ಕಾಪು ತಾಲೂಕಿನ ಪಡುಬಿದ್ರೆ ಸಮೀಪದ ಕಂಚಿನಡ್ಕ ನಿವಾಸಿ ಝೀನತ್ ಇಬ್ರಾಹಿಂ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಉಡುಪಿ ಮೂಲದ ದೂರುದಾರರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ವೇಳೆ ಆರೋಪಿತೆಯ ಪರಿಚಯವಾಗಿದ್ದು, ಇಬ್ಬರೂ ಸೇರಿ ಉಡುಪಿಯಲ್ಲಿ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿ ಆರಂಭಿಸಿದ್ದರು. ಆರೋಪಿತೆಯ ಮಾತು ನಂಬಿ ಜಮೀನು ಖರೀದಿಗೆ ಹೂಡಿಕೆ ಮಾಡುವ ಉದ್ದೇಶದಿಂದ ದೂರುದಾರರು ₹70 ಲಕ್ಷ ನೀಡಿದ್ದರು. ಆದರೆ, ಆರೋಪಿತೆ ಆ ಹಣವನ್ನು ಜಮೀನು ಖರೀದಿಗೆ ಬಳಸದೆ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಕಚೇರಿ ಮುಚ್ಚುವ ಸಂದರ್ಭದಲ್ಲಿ ಕೆಲವು ಕಡತಗಳು ಹಾಗೂ ಪೆನ್‌ಡ್ರೈವ್ ದೊರೆತಿದ್ದು, ಅವುಗಳಲ್ಲಿ ಹಲವಾರು ಕಾಂಗ್ರೆಸ್ ಮುಖಂಡ ಸಹಿತ ಗಣ್ಯ ವ್ಯಕ್ತಿಗಳ ಖಾಸಗಿ ಹಾಗೂ ಅಶ್ಲೀಲ ಛಾಯಾಚಿತ್ರ ಮತ್ತು ವಿಡಿಯೊಗಳು ಇದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಆರೋಪಿತೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಖಾಸಗಿ ವಿಡಿಯೊಗಳಿರುವುದಾಗಿ ಹೇಳಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ದೂರುದಾರರ ಕುಟುಂಬದವರ ಜೀವಕ್ಕೂ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಆರೋಪಿತೆಯ ಪತ್ತೆಗಾಗಿ ಪಿಎಸ್‌ಐ ಭರತೇಶ್ ಕಂಕಣವಾಡಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಜುಲೈ 2ರಂದು ಪಡುಬಿದ್ರೆಯ ಕಂಚಿನಡ್ಕದಲ್ಲಿ ಆರೋಪಿತೆಯನ್ನು ಬಂಧಿಸಿದೆ.
ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಐದು ದಿನಗಳ ಪೊಲೀಸ್ ವಶಕ್ಕೆ ನೀಡಲಾಗಿದೆ.
ಈ ಮಹಿಳೆಯಿಂದ ಇದೇ ರೀತಿಯ ಮೋಸ ಅಥವಾ ವಂಚನೆಗೆ ಒಳಗಾಗಿರುವವರು ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ರಿಯಲ್ ಎಸ್ಟೇಟ್ ಹೂಡಿಕೆ ಹೆಸರಲ್ಲಿ ₹70 ಲಕ್ಷ ವಂಚನೆ ಆರೋಪ; ಮಹಿಳೆ ಬಂಧನ
More articles

