Wednesday, October 14, 2026

ನಿಟ್ಟೆಯ ಹಲಸು ಸಂಸ್ಕರಣಾ ಘಟಕ ನಿಷ್ಕ್ರಿಯ ಸ್ಥಿತಿಗೆ: ₹5.70 ಕೋಟಿ ಅನುದಾನ ಬಳಕೆ ಬಗ್ಗೆ ತನಿಖೆಗೆ ಆಗ್ರಹ

Must read

ಉಡುಪಿ: ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಆರಂಭಿಸಲಾದ ಹಲಸು ಸಂಸ್ಕರಣಾ ಘಟಕ ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಘಟಕ ನಾಮಕಾವಸ್ಥೆಯಲ್ಲಿ ಮುಂದುವರಿದಿದ್ದು, ಸರ್ಕಾರದಿಂದ ಪಡೆದ ಅನುದಾನದ ಬಳಕೆ ಕುರಿತು ಅನುಮಾನಗಳು ಮೂಡಿವೆ ಎಂದು ಸಾಮಾಜಿಕ ಕಾರ್ಯಕರ್ತ ಬೆಳ್ಳಿಪ್ಪಾಡಿ ನೇಮಿರಾಜ್ ರೈ ಆರೋಪಿಸಿದರು.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಂಪ್ರದಾಯಿಕ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ನಿಧಿ ಯೋಜನೆ (ಎಸ್‌ಎಫ್‌ಯುಆರ್‌ಟಿಐ) ಅಡಿಯಲ್ಲಿ ಈ ಹಲಸು ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ ನಿಟ್ಟೆಯಲ್ಲಿ ಪ್ರತ್ಯೇಕ ಸುಫಲ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯನ್ನು ಆರಂಭಿಸಲಾಗಿದೆ. ಕಂಪನಿಯಲ್ಲಿ 750 ಸದಸ್ಯರಿದ್ದಾರೆ ಎಂದು ಹೇಳಲಾಗುತ್ತಿದ್ದು, ಸುಮಾರು 1,000 ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಭರವಸೆ ನೀಡಲಾಗಿತ್ತು. ಆದರೆ, ಈ ಭರವಸೆಗಳು ಈಡೇರಿದಂತೆ ಕಾಣುತ್ತಿಲ್ಲ ಎಂದು ದೂರಿದರು.
ಆರಂಭದಲ್ಲಿ ಈ ಯೋಜನೆಯನ್ನು ರೈತರು ಹಾಗೂ ಗ್ರಾಮೀಣ ಮಹಿಳೆಯರ ಪಾಲಿಗೆ ಮಹತ್ವದ ಉದ್ಯಮವೆಂದು ಬಿಂಬಿಸಲಾಗಿತ್ತು. ಹಲಸನ್ನು ರಾಜ್ಯದ ಪ್ರಮುಖ ಬೆಳೆಯನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಯೋಜನೆ ನೆರವಾಗಲಿದೆ ಎಂದು ಉದ್ಘಾಟನಾ ಸಂದರ್ಭದಲ್ಲಿ ಶಾಸಕರು ಭರವಸೆ ನೀಡಿದ್ದರು. ಉಡುಪಿ ಜಿಲ್ಲೆಯ ಸುಮಾರು ನಾಲ್ಕು ಲಕ್ಷ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಲಾಗಿತ್ತು. ಆದರೆ, ಪ್ರಸ್ತುತ ಘಟಕದ ಕಾರ್ಯನಿರ್ವಹಣೆಯ ಸ್ಥಿತಿ ನಿರಾಶಾದಾಯಕವಾಗಿದೆ ಎಂದು ಅವರು ಹೇಳಿದರು.
ಹಲಸಿನಿಂದ ಚಿಪ್ಸ್‌, ಬೀಜದ ಪುಡಿ, ಹಲ್ವ, ಜ್ಯೂಸ್‌, ಪಪ್ಪಡ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುವುದರ ಜತೆಗೆ ಗೋಡಂಬಿ, ಬಾಳೆಹಣ್ಣು ಹಾಗೂ ತರಕಾರಿಗಳ ಸಂಸ್ಕರಣೆಗೂ ಅವಕಾಶವಿತ್ತು. ಹಲಸಿನ ತ್ಯಾಜ್ಯವನ್ನು ಬಳಸಿ ಪರಿಸರಸ್ನೇಹಿ ಊಟದ ತಟ್ಟೆಗಳನ್ನು ತಯಾರಿಸುವ ಯೋಜನೆಯೂ ಇತ್ತು. ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ನಿರೀಕ್ಷೆಯನ್ನೂ ಮೂಡಿಸಲಾಗಿತ್ತು. ಆದರೆ, ಇಷ್ಟೆಲ್ಲಾ ಅವಕಾಶಗಳಿದ್ದರೂ ಘಟಕ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ ಎಂದರು.
ಕೇಂದ್ರ ಸರ್ಕಾರದಿಂದ ಸುಮಾರು ₹5 ಕೋಟಿ ಹಾಗೂ ನೀತಿ ಆಯೋಗದಿಂದ ₹70 ಲಕ್ಷ ಸೇರಿದಂತೆ ಒಟ್ಟು ₹5.70 ಕೋಟಿ ಅನುದಾನ ಪಡೆದಿರುವುದಾಗಿ ತಿಳಿದುಬಂದಿದೆ. ಈ ಹಣವನ್ನು ಯಾವ ಉದ್ದೇಶಗಳಿಗೆ ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಬಹಿರಂಗವಾಗಬೇಕು. ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡುವ ಹೆಸರಿನಲ್ಲಿ ಆರಂಭವಾದ ಯೋಜನೆಯ ಪ್ರಸ್ತುತ ಸ್ಥಿತಿ ಹಾಗೂ ಅನುದಾನದ ಬಳಕೆಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ನೇಮಿರಾಜ್ ರೈ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಆನಂದ ಜೋಸೆಫ್, ಕೊಲ್ವಿನ್ ಒಪಿಲಿಯಾ ಡಿಸೋಜಾ ಹಾಗೂ ಶೋಭಾ ಕುಲಾಲ್ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here