ಬೆಂಗಳೂರು: ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ ಯಾರು ಸೇರಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಕುರಿತು ಸಂಭಾವ್ಯ ಸಚಿವರ ಪಟ್ಟಿ ಹೊರಬಿದ್ದಿದೆ.
ಈ ನಡುವೆ, ದೆಹಲಿಯಲ್ಲಿ ಕಾಂಗ್ರೆಸ್ ನಾಯಕ K. C. Venugopal ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಯುತ್ತಿದ್ದು, ಡಿ.ಕೆ. ಶಿವಕುಮಾರ್ ಭಾಗವಹಿಸಿ ಸಚಿವ ಸಂಪುಟ ರಚನೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಪಕ್ಷದ ಹಿರಿಯ ನಾಯಕರು ಹಾಗೂ ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ರಚನೆಗೆ ಕಸರತ್ತು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಹಿರಿಯ ನಾಯಕರ ಹೆಸರುಗಳು ಸಚಿವ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬರುತ್ತಿವೆ.
ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇರುವವರಲ್ಲಿ ಕೆ.ಜೆ. ಜಾರ್ಜ್, ಡಾ. ಜಿ. ಪರಮೇಶ್ವರ, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಯು.ಟಿ. ಖಾದರ್, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಹಾಗೂ ಈಶ್ವರ್ ಖಂಡ್ರೆ ಅವರ ಹೆಸರುಗಳು ಪ್ರಮುಖವಾಗಿ ಚರ್ಚೆಯಲ್ಲಿವೆ.
ಇದರೊಂದಿಗೆ, ಮಾಜಿ ಮುಖ್ಯಮಂತ್ರಿ Siddaramaiah ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ, ಸಿದ್ದರಾಮಯ್ಯ ಅವರ ಆಪ್ತ ಹಾಗೂ ಹಿರಿಯ ಕಾಂಗ್ರೆಸ್ ನಾಯಕ K. H. Muniyappa ಅವರ ಪುತ್ರಿ ರೂಪಾ ಶಶಿಧರ್ ಅವರ ಹೆಸರೂ ಸಚಿವ ಸ್ಥಾನಕ್ಕೆ ಪರಿಗಣನೆಯಲ್ಲಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಆದರೆ, ಸಚಿವ ಸಂಪುಟದ ಅಂತಿಮ ರೂಪುರೇಷೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಘೋಷಣೆ ಹೊರಡಿಸಿದ ಬಳಿಕವೇ ಸ್ಪಷ್ಟ ಚಿತ್ರಣ ದೊರೆಯಲಿದೆ. ಪ್ರಾದೇಶಿಕ ಪ್ರತಿನಿಧಿತ್ವ, ಜಾತಿ ಸಮೀಕರಣ ಹಾಗೂ ಅನುಭವಕ್ಕೆ ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಾಳೆ (ಜೂ.3) 10 ಶಾಸಕರೊಂದಿಗೆ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ: ಡಿಕೆಶಿ ಸಂಪುಟದಲ್ಲಿ ಯಾರಿಗೆ ಅವಕಾಶ?
More articles

