Monday, September 7, 2026

ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ; ಹೊಸ ರಾಜಕೀಯ ವೇದಿಕೆ ಸ್ಥಾಪನೆಗೆ ಚಿಂತನೆ

Must read

ನವದೆಹಲಿ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸುವ ಮೂಲಕ ಆರು ವರ್ಷಗಳ ಪಕ್ಷದೊಂದಿಗಿನ ನಂಟಿಗೆ ತೆರೆ ಎಳೆದಿದ್ದಾರೆ ಎಂದು ವರದಿಯಾಗಿದೆ.
ಎಐಎಡಿಎಂಕೆ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಮರು ಸೇರ್ಪಡೆಯಾದ ಬಳಿಕ ಅಣ್ಣಾಮಲೈ ಅವರನ್ನು ಪಕ್ಷದ ಉನ್ನತ ನಾಯಕತ್ವ ಕಡೆಗಣಿಸುತ್ತಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಪಕ್ಷದ ಕೆಲವು ನಿರ್ಧಾರಗಳ ಬಗ್ಗೆ ಅವರು ಅಸಮಾಧಾನ ಹೊಂದಿದ್ದರು ಎನ್ನಲಾಗಿದ್ದು, ಈ ಹಿಂದೆ ತಮಿಳುನಾಡು ವಿಧಾನಸಭಾ ಚುನಾವಣೆಯ ಉಸ್ತುವಾರಿ ಸ್ಥಾನ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದರು.
ಬಿಜೆಪಿ ತೊರೆದು ‘ಮಕ್ಕಳ್ ಶಕ್ತಿ ಇಯಕ್ಕಂ’ (ಜನಶಕ್ತಿ ಆಂದೋಲನ) ಹೆಸರಿನ ಹೊಸ ಜನಪರ ಸಂಘಟನೆ ಅಥವಾ ರಾಜಕೀಯ ಚಳವಳಿಯನ್ನು ಆರಂಭಿಸುವ ಬಗ್ಗೆ ಅಣ್ಣಾಮಲೈ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಕುರಿತು ಅವರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಇತ್ತೀಚೆಗೆ ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯನ್ನು ಅಣ್ಣಾಮಲೈ ಬಹಿರಂಗವಾಗಿ ಟೀಕಿಸಿದ್ದರು. 9ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಅಧ್ಯಯನವನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನಾಯಕತ್ವದೊಂದಿಗೆ ಅವರ ಭಿನ್ನಾಭಿಪ್ರಾಯಗಳ ಬಗ್ಗೆ ಊಹಾಪೋಹಗಳು ಹೆಚ್ಚಾಗಿದ್ದವು.
ಈ ನಡುವೆ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಭಾವಚಿತ್ರವಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ‘ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ’ ಎಂಬ ಸಂದೇಶವನ್ನು ಒಳಗೊಂಡಿವೆ. ಈ ಬೆಳವಣಿಗೆಗಳು ಅವರ ಮುಂದಿನ ರಾಜಕೀಯ ನಡೆ ಕುರಿತು ಕುತೂಹಲ ಮೂಡಿಸಿವೆ.
2021ರಿಂದ 2025ರವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ, ರಾಜ್ಯದಲ್ಲಿ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ–ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿರುವ ವಿಚಾರವೂ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಆದರೆ, ಅಣ್ಣಾಮಲೈ ರಾಜೀನಾಮೆ ಕುರಿತು ಬಿಜೆಪಿ ಅಥವಾ ಅವರ ಕಡೆಯಿಂದ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.

spot_img

More articles

LEAVE A REPLY

Please enter your comment!
Please enter your name here