ಉಡುಪಿ: ನಗರದ ಡಾ. ಟಿಎಂಎ ಪೈ ಆಸ್ಪತ್ರೆ ಜೂನ್ 1ರಿಂದ ಕಡೆಕಾರ್ ಸ್ವಾಗತ ಗೋಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಹೊಸ ಹಾಗೂ ನವೀಕರಿಸಿದ ಕಟ್ಟಡದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.
1984ರಲ್ಲಿ ಸ್ಥಾಪನೆಯಾದ ಆಸ್ಪತ್ರೆಯು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಆರೋಗ್ಯ ಸೇವೆ ನೀಡಿದ ಬಳಿಕ ಇದೀಗ ವಿಶಾಲ ಮತ್ತು ಆಧುನಿಕ ಸೌಲಭ್ಯಗಳಿರುವ ಹೊಸ ಕ್ಯಾಂಪಸ್‌ಗೆ ಸ್ಥಳಾಂತರಗೊಳ್ಳುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 1.4 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಹೊಸ ಆಸ್ಪತ್ರೆಯಲ್ಲಿ ಸುಧಾರಿತ ಮೂಲಸೌಕರ್ಯ, ಆಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ರೋಗಿ ಸ್ನೇಹಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಮೇ 22ರಿಂದ 24ರವರೆಗೆ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಆಸ್ಪತ್ರೆ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
152 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್, ಮಕ್ಕಳ ವಿಭಾಗ, ಮೂಳೆ ಮತ್ತು ಕೀಲು ವಿಭಾಗ, ಕಿವಿ–ಮೂಗು–ಗಂಟಲು, ಪ್ರಸೂತಿ ಮತ್ತು ಸ್ತ್ರೀರೋಗ, ನೇತ್ರಶಾಸ್ತ್ರ, ಮನೋವೈದ್ಯಶಾಸ್ತ್ರ, ಗ್ಯಾಸ್ಟ್ರೋಎಂಟರಾಲಜಿ, ಸಾಮಾನ್ಯ ಶಸ್ತ್ರಚಿಕಿತ್ಸೆ, ಚರ್ಮರೋಗ, ದಂತವೈದ್ಯಶಾಸ್ತ್ರ, ಫಿಸಿಯೋಥೆರಪಿ ಹಾಗೂ ವಾಕ್ ಮತ್ತು ಶ್ರವಣ ವಿಭಾಗಗಳ ಸೇವೆಗಳು ಲಭ್ಯವಿರಲಿವೆ ಎಂದರು.
ಹೃದ್ರೋಗ, ನರವಿಜ್ಞಾನ, ಮೂತ್ರಪಿಂಡಶಾಸ್ತ್ರ, ಸರ್ಜಿಕಲ್ ಆಂಕೊಲಾಜಿ, ನರಶಸ್ತ್ರಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ವಿವಿಧ ಸೂಪರ್ ಸ್ಪೆಷಾಲಿಟಿ ವಿಭಾಗಗಳ ತಜ್ಞರ ಸಮಾಲೋಚನೆಗಳೂ ಇರಲಿವೆ.
24×7 ತುರ್ತು ಚಿಕಿತ್ಸೆ ಮತ್ತು ಅಪಘಾತ ಆರೈಕೆ ಕೇಂದ್ರ, ನಾಲ್ಕು ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು, 25 ಹಾಸಿಗೆಗಳ ವಿಸ್ತೃತ ಐಸಿಯು, ಸುಧಾರಿತ ಡಯಾಲಿಸಿಸ್ ಕೇಂದ್ರ, ಸಿಟಿ ಸ್ಕ್ಯಾನ್, ಅಲ್ಟ್ರಾಸೌಂಡ್, ಎಕ್ಸ್–ರೇ, ಪ್ರಯೋಗಾಲಯ ಹಾಗೂ ಔಷಧಾಲಯ ಸೇವೆಗಳು ಆಸ್ಪತ್ರೆಯ ಪ್ರಮುಖ ಸೌಲಭ್ಯಗಳಾಗಿವೆ. ಆರೋಗ್ಯ ತಪಾಸಣೆ, ಡೇ ಕೇರ್ ಸೇವೆಗಳು ಮತ್ತು ವಿಶಾಲ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 66ರ ತುರ್ತು ಪರಿಸ್ಥಿತಿಗಳಲ್ಲಿ ತ್ವರಿತ ಚಿಕಿತ್ಸೆ ಒದಗಿಸಲು ಹೊಸ ಆಸ್ಪತ್ರೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ರೋಗಿಗಳ ಸುರಕ್ಷತೆ, ಸುಲಭ ಪ್ರವೇಶ ಮತ್ತು ಕುಟುಂಬ ಸ್ನೇಹಿ ವಾತಾವರಣಕ್ಕೆ ಆದ್ಯತೆ ನೀಡಲಾಗಿದೆ. ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವುದು ಆಸ್ಪತ್ರೆಯ ಮುಖ್ಯ ಉದ್ದೇಶ ಎಂದು ಉಪ ವೈದ್ಯಕೀಯ ಅಧೀಕ್ಷಕ ಡಾ. ರಾಜಾರಾಮ್ ಪೈ ತಿಳಿಸಿದ್ದಾರೆ.
ಆಸ್ಪತ್ರೆಯ ಆಡಳಿತ ಮುಖ್ಯಸ್ಥ ಹಾಗೂ ಗ್ರೂಪ್ ಮ್ಯಾನೇಜರ್ ದೀಪಕ್ ಪ್ರಭು ಮಾತನಾಡಿ, ‘ರೋಗಿಗಳ ಸುರಕ್ಷತೆ, ಗುಣಮಟ್ಟದ ಆರೈಕೆ ಹಾಗೂ ಭವಿಷ್ಯದ ಆರೋಗ್ಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಆಸ್ಪತ್ರೆಯನ್ನು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಉಡುಪಿ: ಜೂನ್ 1ರಿಂದ ಹೊಸ ಕಟ್ಟಡದಲ್ಲಿ ಡಾ. ಟಿಎಂಎ ಪೈ ಆಸ್ಪತ್ರೆ ಸೇವೆ ಆರಂಭ

