ಚೆನ್ನೈ: ತಮಿಳು ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಗಾಯಕ ದೇವಾ ಅವರು ಶನಿವಾರ (ಅಕ್ಟೋಬರ್ 17, 2026) ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೂಲಗಳ ಪ್ರಕಾರ ದೇವಾ ಅವರು ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರ ನಿಧನದ ಸುದ್ದಿ ತಮಿಳು ಚಿತ್ರರಂಗ ಹಾಗೂ ಸಂಗೀತ ಪ್ರಿಯರಲ್ಲಿ ದುಃಖ ಮೂಡಿಸಿದೆ.
ಅಭಿಮಾನಿಗಳಿಂದ ಪ್ರೀತಿಯಿಂದ ‘ತೆನಿಸೈ ತೆಂದ್ರಲ್’ ಎಂದು ಕರೆಸಿಕೊಳ್ಳುತ್ತಿದ್ದ ದೇವಾ, ತಮ್ಮ ವಿಭಿನ್ನ ಸಂಗೀತ ಶೈಲಿ, ಜನಪ್ರಿಯ ಹಾಡುಗಳು ಹಾಗೂ ಗಾನಾ ಸಂಗೀತವನ್ನು ಮುಖ್ಯವಾಹಿನಿಯ ತಮಿಳು ಚಿತ್ರರಂಗಕ್ಕೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
400ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ:
ಸುಮಾರು ನಾಲ್ಕು ದಶಕಗಳ ಸಂಗೀತ ಪಯಣದಲ್ಲಿ ದೇವಾ ಅವರು ತಮಿಳು ಮಾತ್ರವಲ್ಲದೆ ಕನ್ನಡ, ತೆಲುಗು ಮತ್ತು ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ 400ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
1990ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಜನಪ್ರಿಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಅವರು, ಹಲವು ಯಶಸ್ವಿ ಚಿತ್ರಗಳಿಗೆ ಸ್ಮರಣೀಯ ಹಾಡುಗಳನ್ನು ನೀಡಿದ್ದಾರೆ.
ರಜನಿಕಾಂತ್ ಅಭಿನಯದ ‘ಬಾಷಾ’, ‘ಅಣ್ಣಾಮಲೈ’, ಅಜಿತ್ ಅಭಿನಯದ ‘ಆಸೈ’, ‘ಕಾದಲ್ ಕೋಟೈ’, ‘ವಾಲಿ’ ಹಾಗೂ ವಿಜಯ್ ಅಭಿನಯದ ‘ಖುಷಿ’ ಸೇರಿದಂತೆ ಹಲವು ಚಿತ್ರಗಳ ಸಂಗೀತದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.
ದೇವಾ ತಮಿಳು ತೆಲುಗು ಮಾತ್ರವಲ್ಲದೇ ಕನ್ನಡದ ಹಲವು ಸೂಪರ್ ಹಿಟ್ ಚಿತ್ರಗಳ ಸಂಗೀತ ಸಂಯೋಜನೆಯ ಭಾಗವಾಗಿದ್ದರು. ಅಮೃತವರ್ಷಿಣಿ, ಗಲಾಟೆ ಅಳಿಯಂದ್ರು, ಜಿತೇಂದ್ರ, ಕೋಟಿಗೊಬ್ಬ, ನಾನು ನಾನೇ, ನಟ, ಸೈನಿಕ, ಸಿಂಹಾದ್ರಿಯ ಸಿಂಹ, ಕದಂಬ, ವಿಷ್ಣು ಸೇನಾ, ಆಕಾಶ ಗಂಗೆ, ಒಲವೇ ಮಂದಾರ ಸೇರಿದಂತೆ ಹಲವು ಚಿತ್ರಗಳ ಭಾಗವಾಗಿದ್ದರು.ಪ್ರಮಖವಾಗಿ ಅಮೃತವರ್ಷಿಣಿ ಚಿತ್ರಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನೂ ಪಡೆದಿದ್ದರು.
ಗಾನಾ ಸಂಗೀತಕ್ಕೆ ಜನಪ್ರಿಯತೆ ತಂದುಕೊಟ್ಟಿದ್ದರು
ಚೆನ್ನೈ ನಗರದ ಸ್ಥಳೀಯ ಸಂಸ್ಕೃತಿಯ ಭಾಗವಾಗಿದ್ದ ಗಾನಾ ಸಂಗೀತವನ್ನು ಸಿನಿಮಾ ಹಾಡುಗಳ ಮೂಲಕ ದೊಡ್ಡ ಮಟ್ಟದ ಪ್ರೇಕ್ಷಕರಿಗೆ ತಲುಪಿಸುವಲ್ಲಿ ದೇವಾ ಅವರ ಕೊಡುಗೆ ಮಹತ್ವದ್ದಾಗಿತ್ತು.
ಚುರುಕಾದ ಲಯದ ಹಾಡುಗಳ ಜೊತೆಗೆ ಮಧುರ ಪ್ರೇಮಗೀತೆಗಳನ್ನೂ ಸಂಯೋಜಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಸಂಗೀತ ಕ್ಷೇತ್ರದ ಸಾಧನೆಗಾಗಿ ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಪಾತ್ರರಾಗಿದ್ದರು. ‘ಆಸೈ’ ಚಿತ್ರದ ಸಂಗೀತಕ್ಕಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದ್ದರು.
ಸಂಗೀತ ಕ್ಷೇತ್ರದಲ್ಲೂ ಮುಂದುವರಿದ ಕುಟುಂಬದ ಪರಂಪರೆ
ದೇವಾ ಅವರ ಪುತ್ರ ಶ್ರೀಕಾಂತ್ ದೇವಾ ಕೂಡ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಸಹೋದರರಾದ ಸಬೇಶ್ ಮತ್ತು ಮುರಳಿ ಕೂಡ ಸಂಗೀತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ವಿಶಿಷ್ಟ ಸಂಗೀತ ಶೈಲಿ ಮತ್ತು ಜನಪ್ರಿಯ ಹಾಡುಗಳ ಮೂಲಕ ಹಲವು ತಲೆಮಾರುಗಳ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದ ದೇವಾ ಅವರ ನಿಧನದಿಂದ ದಕ್ಷಿಣ ಭಾರತದ ಚಿತ್ರಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಅವರ ಹಾಡುಗಳು ಮತ್ತು ಸಂಗೀತ ಕೊಡುಗೆಗಳು ಅಭಿಮಾನಿಗಳ ನೆನಪಿನಲ್ಲಿ ಸದಾ ಉಳಿಯಲಿವೆ.

