ಉಡುಪಿ: ಉಡುಪಿ ಅಜ್ಜರಕಾಡಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನ. 1ರಿಂದ 3ರ ವರೆಗೆ 14 ರ ವಯೋಮಾನದ ಶಾಲಾ ಬಾಲಕ – ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಲಿದೆ.
ಜಿಲ್ಲಾಡಳಿತ, ಜಿ.ಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ಯಶ್ ಪಾಲ್ ಸುವರ್ಣ ಅವರು, ನ.1ರಂದು ಸಂಜೆ 4.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಂದನಾ ಸ್ವೀಕಾರ ಪಡೆಯಲಿದ್ದಾರೆ ಎಂದರು.
ಇದಕ್ಕೂ ಮುಂಚೆ ಅಂದು 3 ಗಂಟೆಗೆ ಉಡುಪಿ ಶೋಕಮಾತ ಇಗರ್ಜಿಯಿಂದ ಕೋರ್ಟ್ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಮೆರವಣಿಗೆಯಲ್ಲಿ ಕ್ರೀಡಾಪಟುಗಳು ಮೈದಾನಕ್ಕೆ ಆಗಮಿಸಲಿದ್ದಾರೆ. ಈ ಕ್ರೀಡಾಕೂಟದಲ್ಲಿ 35 ಶೈಕ್ಷಣಿಕ ಜಿಲ್ಲೆಗಳು ಹಾಗೂ 2 ಕ್ರೀಡಾ ವಸತಿ ಶಾಲೆಗಳಿಂದ 1,800 ವಿದ್ಯಾರ್ಥಿಗಳು, 250 ತಂಡದ ವ್ಯವಸ್ಥಾಪಕರು, 250 ಕ್ರೀಡಾಧಿಕಾರಿಗಳು ಹಾಗು 200 ಸ್ವಯಂ ಸೇವಕರು, ಕ್ರೀಡಾ ಆಯೋಜಕರು ಒಳಗೊಂಡಂತೆ 2,500 ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ, ಯುವಜನ ಸೇವೆ, ಕ್ರೀಡಾ ಸಚಿವ ಬಿ.ನಾಗೇಂದ್ರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಡಿಪಿಐ ಗಣಪತಿ, ಸಂಸ್ಥೆಯ ಪಿ.ಟಿ.ಎ ಉಪಾಧ್ಯಕ್ಷ ಸೋಹೆಲ್ ಆಮೀನ್, ಸಂಸ್ಥೆಯ ಮುಖ್ಯ ಶಿಕ್ಷಕಿ ಪ್ರೀತಿ.ಜೆ.ಕ್ರಾಸ್ತಾ, ವಿವಿಧ ಸಮಿತಿಯ ಪ್ರಶಾಂತ್ ಜತ್ತನ್, ನಿರ್ಮಲಾ, ರೀಟಾ ಲೋಬೋ, ಸಂಸ್ಥೆಯ ಜಂಟಿ ಕಾರ್ಯದರ್ಶಿ ತೆರೇಸಾ ಜ್ಯೋತಿ ಉಪಸ್ಥಿತರಿದ್ದರು.