Thursday, February 26, 2026

ಕಡಿಮೆ ಗುಣಮಟ್ಟದ ಹಾಲು ಸ್ವೀಕರಿಸಲು ಅವಕಾಶ- ರವಿರಾಜ್ ಹೆಗ್ಡೆ

Must read

ಉಡುಪಿ: ಹಾಲು ಉತ್ಪಾದಕರ ಸಂಘದಲ್ಲಿ ಈ ಹಿಂದೆ ಕಡಿಮೆ ಗುಣಮಟ್ಟದ ಹಾಲನ್ನು ಸ್ವೀಕರಿಸದೆ ತಿರಸ್ಕಾರ ಮಾಡಲಾಗುತ್ತಿತ್ತು. ಮುಂದಿನ ಹಂತದಲ್ಲಿ ಕಡಿಮೆ ಗುಣಮಟ್ಟದ ಹಾಲನ್ನು ಕೂಡ ಸ್ವೀಕರಿಸಲು ಸಂಘದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಅವರಿಗೆ ಸರಕಾರದ 5ರೂ. ಅನುದಾನ ಇರುವುದಿಲ್ಲ ಹಾಗೂ ದರದಲ್ಲಿಯೂ ವ್ಯಾತ್ಯಾಸ ಇರುತ್ತದೆ ಎಂದು ದ.ಕ ಹಾಲು ಸಹಕಾರಿ ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.
ಅವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ಉಡುಪಿ ಹಾಗೂ ಸಹಕಾರ ಇಲಾಖೆ ಇವರ ಸಂಯುಕ್ತಾಶ್ರದಲ್ಲಿ ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಾಲಿನ ಗುಣಮಟ್ಟವನ್ನು ವೃದ್ಧಿಸುವ ಒತ್ತಡ ಸಂಘದ ಸದಸ್ಯರ ಮೇಲೆಯೂ ಇರುತ್ತದೆ. ಉತ್ತಮ ಗುಣಮಟ್ಟದ ಹಾಲು ಸಂಗ್ರಹದಲ್ಲಿ ಬೆಂಗಳೂರು ಹಾಗೂ ತುಮಕೂರಿನವರು ನಮ್ಮನ್ನು ಮೀರಿ ಹೋಗುತ್ತಿದ್ದಾರೆ. ಈ ರೀತಿಯ ಮಾನ ದಂಡದಿಂದ ಹಾಲಿನ ಸಂಗ್ರಹ ಹೆಚ್ಚಾಗುತ್ತದೆ. ಆಗ ಮಾತ್ರ ಸಂಘ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ ಎಂದರು.
ಹೈನುಗಾರರಿಗೆ ಹೆಚ್ಚುವರಿ 1 ರೂ. ಪ್ರೋತ್ಸಾಹ ಧನ:
ಹೈನುಗಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮೇ ತಿಂಗಳ ಅಂತ್ಯದವರೆಗೆ ಪ್ರತೀ ಲೀಟ‌ರ್ ಹಾಲಿಗೆ 1 ರೂಪಾಯಿ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು‌ ಆಡಳಿತ ಮಂಡಳಿ ನಿರ್ಧರಿಸಿದೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚುವರಿ ಸಹಕಾರ ನೀಡಲು ಉದ್ದೇಶದಿಂದ ಲಾಭ ಕಡಿಮೆಯಾದರೂ ಪರವಾಗಿಲ್ಲ. ಈ ವರ್ಷ ಲಾಭ ಹಿಂದಿನ ವರ್ಷದಷ್ಟು ಇರುವುದಿಲ್ಲ. ಶೇ.12 ಡಿವಿಡೆಂಟ್ ಕೊಟ್ಟರೂ ತೊಂದರೆ ಇಲ್ಲ. ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಮೇ ತಿಂಗಳ ಅಂತ್ಯದವರೆಗೆ ಸುಮಾರು 4 ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಭರವಸೆ ನೀಡಿದರು.
ಒಂದು ಲೀಟರ್‌ ಹಾಲಿಗೆ 5ರೂ. ಅನುದಾನ ಸಿಗಬೇಕಾದರೆ ಸಂಘಗಳಲ್ಲಿ ಆನ್‌ಲೈನ್ ವ್ಯವಸ್ಥೆ ಇರಬೇಕು. ಆನ್‌ಲೈನ್ ವ್ಯವಸ್ಥೆ ಇಲ್ಲದ ಸಂಘಗಳಿಗೆ ಒಕ್ಕೂಟದ ಖರ್ಚಿನಲ್ಲಿ ಆನ್‌ಲೈನ್ ಸರಿಪಡಿಸುವ ಕಾರ್ಯ ಮಾಡಲಾಗುವುದು. ಇದಕ್ಕೆ ಮಾಡಲು 50ಲಕ್ಷ ರೂ. ಮೀಸಲಿರಿಸಲಾಗಿದೆ ಎಂದರು.
ದ.ಕ ಹಾಲು ಸಹಕಾರಿ ಉತ್ಪಾದಕರ ಒಕ್ಕೂಟದ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಎಲ್ಲರನ್ನು ವಿಶ್ವಾಸ ತೆಗೆದುಕೊಂಡು ಕೆಲಸ ಮಾಡಿದಾಗ ಸಂಘದ ಅಭಿವೃದ್ಧಿ. ಹಾಲಿನ ಪ್ರಮಾಣ ಜಾಸ್ತಿ‌ ಮಾಡಲು ಎಲ್ಲ ಸದಸ್ಯರು ಶ್ರಮಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ಹಾಲು ಉತ್ಪಾದಕರ ಸಂಘಗಳಿಗೆ ಹಾಲಿನ ಜೊತೆ ವಿವಿಧೋದ್ದೇಶ ಕಾರ್ಯಕ್ರಮಗಳನ್ನು ಮಾಡಲು ಸರಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಆ ನಿಟ್ಟಿನಲ್ಲಿ ಸಂಘಗಳು ಕಾರ್ಯೋನ್ಮುಖವಾಗಬೇಕು ಎಂದರು.
ಯೂನಿಯನ್ ಆಡಳಿತ ಮಂಡಳಿ ಸದಸ್ಯ ಕೆ. ಸುರೇಶ್ ರಾವ್, ಸಂಪನ್ಮೂಲ ವ್ಯಕ್ತಿ ಶಿವಮೊಗ್ಗದ ಸನ್ನದು ಲೆಕ್ಕಪರಿಶೋಧಕ ವರುಣ್ ಭಟ್ ಉಪಸ್ಥಿತರಿದ್ದರು.
ಒಕ್ಕೂಟದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಆಡಳಿತ ಮಂಡಳಿ ಸದಸ್ಯ ಹರೀಶ್ ಕಿಣಿ ವಂದಿಸಿದರು.

spot_img

More articles

LEAVE A REPLY

Please enter your comment!
Please enter your name here