Monday, January 12, 2026

ಕಾರ್ಕಳ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳತನ: ಬೆಲೆಬಾಳುವ ತಾಮ್ರದ ಹೊದಿಕೆಗಳನ್ನು ಕದ್ದೊಯ್ದ ಕಳ್ಳರು!

Must read

ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿರುವ ವಿವಾದಿತ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಮೇಲ್ಛಾವಣಿಗೆ ಹಾಕಲಾಗಿದ್ದ ಬೆಲೆಬಾಳುವ ತಾಮ್ರದ ಹೊದಿಕೆಗಳನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬಿಜೆಪಿ-ಕಾಂಗ್ರೆಸ್ ನಡುವಿನ ರಾಜಕೀಯ ಕೆಸರೆರಚಾಟದ ಕೇಂದ್ರವಾಗಿದ್ದ ಥೀಮ್ ಪಾರ್ಕ್ ಯೋಜನೆ ನಿರ್ವಹಣೆಯಿಲ್ಲದೆ ನೆನೆಗುದಿಗೆ ಬಿದ್ದಿತ್ತು. ಇದೀಗ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ಪಾರ್ಕ್‌ನ ಮೇಲ್ಚಾವಣಿಗೆ ಅಳವಡಿಸಲಾಗಿದ್ದ ಬೆಲೆಬಾಳುವ ತಾಮ್ರದ ಹೊದಿಕೆಗಳನ್ನು ಹೊತ್ತೊಯ್ದಿದ್ದಾರೆ. ಪಾಳುಬಿದ್ದಿರುವ ಈ ಪ್ರದೇಶದಲ್ಲಿ ಭದ್ರತೆಯ ವೈಫಲ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಕಾರ್ಕಳದ ಇತಿಹಾಸದಲ್ಲೇ ಇದೊಂದು ದುರ್ದಿನ- ಸುನಿಲ್ ಕುಮಾರ್
ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಸುನಿಲ್ ಕುಮಾರ್, ಕಾರ್ಕಳದ ಇತಿಹಾಸದಲ್ಲಿ ಇದೊಂದು ದುರ್ದಿನ. ನಮ್ಮ ಅವಧಿಯಲ್ಲಿ ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಭಕ್ತಿಯಿಂದ ಈ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಇಂದು ಅದು ಪಾಳು ಬಿದ್ದು ಕಳ್ಳರ ಪಾಲಾಗಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಳ್ಳತನಕ್ಕೆ ಜಿಲ್ಲಾಡಳಿತದ ವೈಫಲ್ಯ ಮತ್ತು ಕಾಂಗ್ರೆಸ್ ನಾಯಕರ ದ್ವೇಷ ರಾಜಕಾರಣ, ನಿರ್ಲಕ್ಷ್ಯವೇ ಕಾರಣ ಎಂದು ಸುನಿಲ್ ಕುಮಾರ್ ನೇರ ಆರೋಪ ಮಾಡಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರ ಅಸೂಯೆಯಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ಸರ್ಕಾರ ಈ ಯೋಜನೆಗೆ ಬಿಡಿಗಾಸು ಅನುದಾನ ನೀಡಿಲ್ಲ. ಕಾಂಗ್ರೆಸ್‌ನವರ ದ್ವೇಷದ ರಾಜಕಾರಣಕ್ಕೆ ಅಭಿವೃದ್ಧಿ ಬಲಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಈ ಹಿಂದೆ ಪರಶುರಾಮ ಪ್ರತಿಮೆಯ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಕುರಿತು ವಿವಿಧ ಹಂತದ ತನಿಖೆಗಳು ನಡೆಯುತ್ತಿರುವುದರಿಂದ ಯೋಜನೆಯ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ. ತನಿಖೆಯ ನೆಪದಲ್ಲಿ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ, ಪ್ರವಾಸಿಗರ ತಾಣವಾಗಬೇಕಿದ್ದ ಪಾರ್ಕ್ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.

spot_img

More articles

LEAVE A REPLY

Please enter your comment!
Please enter your name here