ಉಡುಪಿ: ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪುರಪ್ರವೇಶದ ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ನಾಳೆ (ಜ.9) ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಮೆರವಣಿಗೆಯು ಶಾರದಾ ಕಲ್ಯಾಣ ಮಂಟಪದಿಂದ ರಾ.ಹೆ-169(ಎ) ರ ಮಾರ್ಗವಾಗಿ ಶಿರಿಬೀಡು ಜಂಕ್ಷನ್ ತಲುಪಿ ಅಲ್ಲಿಂದ ಸರ್ವೀಸ್ ಬಸ್ ನಿಲ್ದಾಣ-ತ್ರಿವೇಣಿ ಜಂಕ್ಷನ್- ಕನಕದಾಸ ರಸ್ತೆ ಮಾರ್ಗವಾಗಿ ಶೀರೂರು ಮಠ ತಲುಪಲಿದೆ. ಆದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆಗಳು ಉಂಟಾಗುವುದರಿಂದ ವಾಹನ ಸಂಚಾರದಲ್ಲಿ ಈ ಕೆಳಕಂಡಂತೆ ವಾಹನಗಳ ಸಂಚಾರ ನಿಷೇಧ ಮತ್ತು ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ. ಜ. 9ರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರಲಿದೆ.
ವಾಹನ ಸಂಚಾರದ ಬದಲಿ ಮಾರ್ಗ ಈ ಕೆಳಕಂಡಂತಿದೆ:
ಮಣಿಪಾಲದಿಂದ ಉಡುಪಿ ನಗರಕ್ಕೆ ಹೋಗುವಂತಹ ವಾಹನಗಳು ಎಂ.ಜಿ.ಎಂ ಎದುರಿನ ಸುನಾಗ್ ಆಸ್ಪತ್ರೆ ಬಳಿ ಎಡ ತಿರುವು ಪಡೆದು ಸುದೀಂದ್ರ ಕಲ್ಯಾಣ ಮಂಟಪ ಮಾರ್ಗವಾಗಿ ಎಸ್.ಕೆ.ಎಂ ಬಳಿ ಎಡ ತಿರುವು ಪಡೆದು ಬೀಡಿನಗುಡ್ಡೆ-ಚಿಟ್ನಾಡಿ-ಅಮ್ಮಣ್ಣಿ ರಾಮಣ್ಣ ಹಾಲ್ ಮುಂದಿನ ರಸ್ತೆಯಿಂದ ಮಿಷನ್ ಕಂಪೌಂಡ್ -ಜೋಡುಕಟ್ಟೆ ತಲುಪಿ ಉಡುಪಿ ನಗರಕ್ಕೆ ತೆರಳುವುದು.
ಶಿರಬೀಡು ಜಂಕ್ಷನ್ ನಿಂದ ಕಿದಿಯೂರು ಹೋಟೆಲ್ ಮೂಲಕ ಸರ್ವೀಸ್ ಬಸ್ ನಿಲ್ಯಾಣದ ವರೆಗಿನ ಏಕಮುಖ ಸಂಚಾರ ವ್ಯವಸ್ಥೆಯ ರಸ್ತೆಯಲ್ಲಿ ಮೆರವಣಿಗೆ ಪ್ರವೇಶಿಸುವ ಸಮಯದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಮಂಗಳೂರು ಕಡೆಯಿಂದ ಉಡುಪಿ ನಗರಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳು ಒಲ್ಡ್ ಡಯಾನ ಸರ್ಕಲ್ ನಿಂದ ಮಿತ್ರ ಪ್ರಿಯಾ ಜಂಕ್ಷನ್ ಮುಖೇನಾ ಚಿತ್ತರಂಜನ್ ಸರ್ಕಲ್, ಸಂಸ್ಕೃತ ಕಾಲೇಜ್ ಜಂಕ್ಷನ್, ಜಾಮೀಯಾ ಮಸೀದಿ ಜಂಕ್ಷನ್ ನಿಂದ ಎಡತಿರುವು ಪಡೆದು ಸರ್ವೀಸ್ ಬಸ್ ನಿಲ್ದಾಣ ತಲುಪುವುದು.
ಈ ನಿಷೇಧವು ವಿವಿಐಪಿ ವಾಹನ, ಸರಕಾರಿ ವಾಹನ ಮತ್ತು ಎಲ್ಲಾ ರೀತಿಯ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ

