ಉಡುಪಿ: ಹೆಜಮಾಡಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸವದಲ್ಲಿ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿದ ಮೂರು ಮಂದಿ ಕಳ್ಳಿಯರನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯದ ಕೃಷ್ಣಗಿರಿ ಮಾರಿಯಮ್ಮ ಬೀದಿಯ ಶೀಥಲ್, ಕಾಳಿಯಮ್ಮ ಹಾಗೂ ಮಾರಿ(40) ಬಂಧಿತ ಆರೋಪಿಗಳು.
ಹೆಜಮಾಡಿಯ ಕಮಲ(78) ಎಂಬವರು ಡಿ.24ರಂದು ಮನೆಯ ಬಳಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸಕ್ಕೆ ಹೋಗಿದ್ದರು. ಅಲ್ಲಿಗೆ ಬಂದ ಈ ಮೂವರು ಕಳ್ಳಿಯರು ಜನಸಂದಣಿಯ ಮಧ್ಯೆಯೇ ಕಮಲ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದರು. ಚಿನ್ನದ ಸರ ಕಳವಾಗಿರುವುದು ಗಮನಕ್ಕೆ ಬಂದಾಗ ದೇವಸ್ಥಾನದ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದು, ಅವರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮೂರು ಅಪರಿಚಿತ ಮಹಿಳೆಯರು ಚಿನ್ನದ ಸರವನ್ನು ಕಳವು ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದರಂತೆ ತನಿಖೆ ನಡೆಸಿದ ಪೊಲೀಸರು, ಮೂವರು ಆರೋಪಿಗಳನ್ನು ಪುತ್ತೂರಿನಲ್ಲಿ ಬಂಧಿಸಿದ್ದಾರೆ. ಇವರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹೆಚ್ಟಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದು ಕೊಂಡಿದ್ದಾರೆ.
ಹೆಜಮಾಡಿ ನೇಮೋತ್ಸವದಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳವು: ತಮಿಳುನಾಡಿನ ಮೂವರು ಕಳ್ಳಿಯರ ಬಂಧನ
More articles

