ಉಡುಪಿ : ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಚತುರ್ಥ ಪರ್ಯಾಯ ಮಹೋತ್ಸವ ವಿಶ್ವ ಗೀತಾ ಪರ್ಯಾಯ'ದ ಅಂಗದ ವಿಶೇಷ ಕಾರ್ಯಕ್ರಮವಾಗಿ ಶ್ರೀಕೃಷ್ಣ ಸಮರ್ಪಣೋತ್ಸವ ‘ ಕಾರ್ಯಕ್ರಮ ಡಿಸೆಂಬರ್ 21ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ವಿಶೇಷ ಅಭ್ಯಾಗತರಾಗಿ ಹರಿದ್ವಾರ ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಶ್ರೀ ಕೈಲಾಶಾನಂದ ಗಿರಿ ಮಹಾರಾಜ್ ಆಗಮಿಸಲಿದ್ದಾರೆ. ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು, ಕಿರಿಯ ಶ್ರೀಗಳಾದ ಶ್ರೀಸುಶ್ರೀಂದ್ರತೀರ್ಥರು, ಇಸ್ಕಾನ್ ಬೆಂಗಳೂರು ಇದರ ಅಕ್ಷಯಪಾತ್ರ ಫೌಂಡೇಶನ್ ಅಧ್ಯಕ್ಷ ಮಧು ಪಂಡಿತ್ ದಾಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಅಂದು ಬೆಳಗ್ಗೆ 10 ಗಂಟೆಗೆ ಇಸ್ಕಾನ್ ಭಕ್ತಾದಿಗಳಿಂದ ಹರಿನಾಮ ಸಂಕೀರ್ತನೆ ನಡೆಯಲಿದೆ.
ಬೆಳಗ್ಗೆ 11 ಗಂಟೆಗೆ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇಸ್ಕಾನ್ ಬೆಂಗಳೂರು ಸಂಸ್ಥೆಯ ಉಪಾಧ್ಯಕ್ಷ ಶ್ರೀಚಂಚಲಾಪತಿ ದಾಸ್ ಅವರಿಂದ ಸ್ವಾಗತ ಮಾತುಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ಸಂದರ್ಭದಲ್ಲಿ ಶ್ರೀ ಪ್ರಭುಪಾದರಿಗೆ ವಿಶ್ವಗುರು ಬಿರುದು ನೀಡಿ ಗೌರವಿಸದ ಕ್ಷಣಗಳ ವೀಡಿಯೋ ಪ್ರದರ್ಶನ ನಡೆಯಲಿದೆ. ನಂತರ ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಸಮರ್ಪಣೋತ್ಸವದ ಫಲಕದ ಅನಾವರಣ, ಶ್ರೀಗಳಿಂದ ಆಶೀರ್ವಚನ, ಪುಸ್ತಕ ಬಿಡುಗಡೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.


