Sunday, January 11, 2026

ಉಡುಪಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷನ ರೆಸಾರ್ಟ್‌ನಲ್ಲಿ ಅಕ್ರಮ ವಿದೇಶಿ ವಲಸಿಗರಿಗೆ ಕೆಲಸ: ಪ್ರಕರಣ ದಾಖಲು

Must read

ಉಡುಪಿ: ಉಡುಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷನಿಗೆ ಸೇರಿದ ರೆಸಾರ್ಟ್ ನಲ್ಲಿ ಯಾವುದೇ ದಾಖಲೆಗಳಿಲ್ಲದಿರುವ ಅಕ್ರಮ ವಿದೇಶಿ ವಲಸಿಗರಿಗೆ ಕೆಲಸ ನೀಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರಕೂರಿನ ಸರಕಾರಿ ಆಸ್ಪತ್ರೆಗೆ ಒಬ್ಬರು ವಿದೇಶಿ ಗರ್ಭಿಣಿಯೊಬ್ಬರು ಚಿಕಿತ್ಸೆಗೆಂದು ಬಂದಿದ್ದು, ಆ ವೇಳೆ ಅಲ್ಲಿನ ವೈದ್ಯರು ಆಕೆಯೊಂದಿಗೆ ದಾಖಲಾತಿಗಳನ್ನು ಕೇಳಿದ್ದರು. ಆದರೆ ಆಕೆ ಯಾವುದೇ ದಾಖಲಾತಿ ಹೊಂದಿಲ್ಲ ಎಂದು ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಯವರು ಸ್ಥಳೀಯ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೂಡಲೇ ಮಾಹಿತಿ ನೀಡಿದ್ದರು. ಅದರಂತೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ ರೀಪಕ್ ದಮಾಯಿ(28), ಸುನೀತಾ ದಮಾಯಿ(27), ಊರ್ಮಿಳಾ(19), ಕೈಲಾಶ್ ದಮಾಯಿ(18) ಕಪಿಲ್ ದಮಾಯಿ(19), ಸುನೀತಾ ದಮಾಯಿ(21) ಹಾಗೂ ಮೂವರು ಸಣ್ಣ ಮಕ್ಕಳು, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿಗೆ ಸೇರಿದ ಹನೆಹಳ್ಳಿ ಗ್ರಾಮದ ಕೂರಾಡಿ ಸಂಕಮ್ಮ ತಾಯಿ ರೆಸಾರ್ಟ್ ನಲ್ಲಿ ಅಕ್ರಮವಾಗಿ ನೆಲೆಸಿರುವುದು ಬೆಳಕಿಗೆ ಬಂದಿದೆ.
ಮೂವರು ಮಕ್ಕಳು ಸೇರಿದಂತೆ ಒಟ್ಟು ಒಂಭತ್ತು ಮಂದಿ ಭಾರತೀಯ ರಾಷ್ಟ್ರೀಯತೆಯನ್ನು ಹೊಂದದೇ ಇದ್ದು, ಯಾವ ದೇಶದವರು ಎಂಬುದಕ್ಕೆ ಇವರಲ್ಲಿ ಯಾವುದೇ ದಾಖಲೆಗಳು ಕಂಡುಬಂದಿಲ್ಲ. ಪ್ರಸಕ್ತ ಇವರು ಯಾವ ದೇಶದ ಪ್ರಜೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಇವರು ಯಾವುದೋ ರಾಷ್ಟ್ರದ ಪ್ರಜೆಗಳಾಗಿದ್ದು, ಅವರಲ್ಲಿ ಯಾವುದೇ ಐಡೆಂಟಿಟಿ ಕಾರ್ಡ್, ಜನ್ಮ ದಾಖಲೆ, ಪಾಸ್ ಪೋರ್ಟ್, ಪ್ರಯಾಣ ದಾಖಲೆ ಹಾಗೂ ವಿಸಾವನ್ನು ಹೊಂದದೇ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿರುವ ವಿದೇಶಿಗರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇವರು ಯಾವ ದೇಶದಿಂದ ಬಂದಿರುವ ಬಗ್ಗೆ ಹಾಗೂ ಯಾವ ದೇಶದ ಪ್ರಜೆಗಳು ಎಂದು ತಿಳಿಸಲು ಅವರಲ್ಲಿ ಯಾವುದೇ ದಾಖಲಾತಿಗಳು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಅಕ್ರಮವಾಗಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧ: ಎಸ್ಪಿ
ಯಾವುದೇ ದೇಶದ ಪ್ರಜೆಗಳು ಅಕ್ರಮವಾಗಿ ದೇಶದಲ್ಲಿ ವಾಸಿಸುವುದು ದೇಶದ ಆಂತರಿಕ ಭದ್ರತೆ ಮಾರಕವಾಗುವ ಸಾಧ್ಯತೆ ಇರುವುದರಿಂದ, ಇಂತಹವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ರೆಸಾರ್ಟ್/ಲಾಡ್ಜ್ ಗಳು ಯಾವುದೇ ಮಾಹಿತಿಗಳಿಲ್ಲದ ವ್ಯಕ್ತಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧವಾಗಿದೆ. ಅಂತಹ ರೆಸಾರ್ಟ್/ಲಾಡ್ಜ್ ಗಳ ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ರೆಸಾಟರ್ಟ್/ಲಾಡ್ಜ್ ಗಳಲ್ಲಿ ಯಾವುದೇ ದೇಶದ ಪ್ರಜೆಗಳು ಬಂದಲ್ಲಿ ಅವರಿಂದ ಇ ಫಾರ್ಮ್ ಪಡೆದು ಜಿಲ್ಲಾ ಪೊಲೀಸ್ ಕಚೇರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಯಾವುದೇ ದೇಶದ ಪ್ರಜೆ ಬಂದಿದ್ದು, ಅವರಲ್ಲಿ ಸಮರ್ಪಕ ದಾಖಲಾತಿ ಇಲ್ಲದೇ ಇದ್ದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಮತ್ತು ಜಿಲ್ಲಾ ಪೊಲೀಸ್ ಕಚೇರಿಗೆ ಕೂಡಲೇ ಮಾಹಿತಿ ನೀಡಬೇಕು ಎಂದು ರೆಸಾರ್ಟ್/ಲಾಡ್ಜ್ ಗಳಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವಂತಹ ರೆಸಾರ್ಟ್/ಲಾಡ್ಜ್ ಗಳ ಮ್ಯಾನೇಜರ್ ಹಾಗೂ ಮಾಲಕರ ವಿರುದ್ದ ಪ್ರಕರಣ ದಾಖಲಿಸಲಾಗುವುದು. ಆದುದರಿಂದ ಜಿಲ್ಲೆಯ ಯಾವುದೇ ರೆಸಾರ್ಟ್/ಲಾಡ್ಜ್ ಗಳಲ್ಲಿ ಯಾವುದೇ ರೀತಿಯ ಅನೈತಿಕ/ ಅನೈತಿಕ/ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಉಡುಪಿ ಜಿಲ್ಲೆಯಲ್ಲಿ ರೆಸಾರ್ಟ್/ಲಾಡ್ಜ್ ಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.

spot_img

More articles

LEAVE A REPLY

Please enter your comment!
Please enter your name here