Monday, April 20, 2026

ಭರದಿಂದ ಸಾಗುತ್ತಿರುವ “ವಾದಿರಾಜ ವಾಲಗ ಮಂಡಳಿ” ಸಿನಿಮಾದ ಚಿತ್ರೀಕರಣ

Must read

ಉಡುಪಿ: ಎಂ.ಎನ್.ಆರ್. ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಿಸಲಾಗುತ್ತಿರುವ ವಾದಿರಾಜ ವಾಲಗ ಮಂಡಳಿ ಕನ್ನಡ ಚಲನಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದ ಮೇ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಪ್ರೊಡಕ್ಷನ್‌ನ ಅಧ್ಯಕ್ಷ, ನಿರ್ಮಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಬ್ರಹ್ಮಾವರ ತೆಂಕುಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 300 ವರ್ಷಗಳ ಇತಿಹಾಸವುಳ್ಳ ಬ್ರಹ್ಮಾವರ ತೆಂಕುಮನೆಯಲ್ಲಿ ಮುಂದಿನ 15 ದಿನಗಳ ಚಿತ್ರೀಕರಣ ನಡೆಯಲಿದ್ದು, ಆ ಬಳಿಕ ಮಂಗಳೂರು ಅದ್ಯಪಾಡಿ, ಮಂಜೇಶ್ವರದಲ್ಲಿ ಚಿತ್ರೀಕರಿಸಲಾಗುತ್ತದೆ. 50 ದಿನಗಳಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿ ಮೇ ನಲ್ಲಿ ತೆರೆ ಕಾಣಲಿದೆ. ಯುವ ನಿರ್ದೇಶಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಾದಿರಾಜ ವಾಲಗ ಮಂಡಳಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಇದು ಹಾಸ್ಯ ಪ್ರಧಾನ ಸಿನಿಮಾವಾಗಿದ್ದು, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಉದ್ದೇಶವಿದೆ.ತಾರಾಂಗಣದಲ್ಲಿ ನವೀನ್ ಡಿ. ಪಡೀಲ್, ಲಕ್ಷ್ಮಣ ಕುಮಾರ್ ಮಲ್ಲೂರು, ಪ್ರಕಾಶ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳೂರ್, ಶೋಭರಾಜ್ ಪಾವೂರು, ಗೋಪಿನಾಥ್ ಭಟ್, ತನ್ವಿ ರಾವ್, ವೇಣ್ಯ ರೈ, ಚೈತ್ರಾ ಶೆಟ್ಟಿ, ಕೀರ್ತನಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಗ್ರಾಮೀಣ ಭಾಗದ ಸೊಗಡನ್ನು ಚಿತ್ರದಲ್ಲಿ ತರುವ ಉದ್ದೇಶದಿಂದ ಇಲ್ಲಿ ಚಿತ್ರೀಕರಿಸುತ್ತಿದ್ದೇವೆ. ಈ ಚಿತ್ರದಲ್ಲಿ ನವೋದಯ ಗುಂಪುಗಳ ಮಹಿಳೆಯರು ಭಾಗವಹಿಸುತ್ತಾರೆ ಎಂದರು.
ಎಂಎನ್‌ಆರ್ ಪ್ರೊಡಕ್ಷನ್ ಸಂಸ್ಥೆಯು 2009 ರಲ್ಲಿ ಆರಂಭಗೊಂಡಿದ್ದು, ಜೋಗುಳ ಎಂಬ ಮೆಗಾ ಧಾರಾವಾಹಿಯನ್ನು ಕಿರುತೆರೆಗೆ ಅರ್ಪಿಸಿದೆ. ವಿನು ಬಳಂಜ ಅವರ ನಿರ್ದೇಶನದಲ್ಲಿ ಸುಮಾರು 600 ಕಂತುಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡ ಈ ಧಾರಾವಾಹಿಯು ಜನಮೆಚ್ಚುಗೆ ಗಳಿಸಿದೆ. ನಿರ್ದೇಶಕ ಎಂ.ಡಿ. ಶ್ರೀಧರ ಅವರ ನಿರ್ದೇಶನದಲ್ಲಿ ಗಲಾಟೆ ಸಿನೆಮಾ ನಟ ಪ್ರಜ್ವಲ್ ದೇವರಾಜ್ ಹಾಗೂ ಬಹುತಾರಾಗಣದಲ್ಲಿ ನಿರ್ಮಾಣವಾಗಿದ್ದು, ಇದು ಬಹುಪಾಲು ವಿದೇಶದಲ್ಲಿ ಚಿತ್ರೀಕರಣಗೊಂಡಿದೆ. ಇದು ಎಂಎನ್‌ಆರ್ ಪ್ರೊಡಕ್ಷನ್ ಸಂಸ್ಥೆಯ ಮೊದಲ ಚಲನಚಿತ್ರವಾಗಿದೆ ಎಂದು ತಿಳಿಸಿದರು.
ಎಂಎನ್‌ಆರ್ ಪ್ರೊಡಕ್ಷನ್ ಸಂಸ್ಥೆ ತುಳುನಾಡಿನ ಸಂಸ್ಥೆಯಾಗಿದ್ದು, ತುಳುಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಗಾಗಲೇ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದಲ್ಲಿ ತುಳು ಸಿನೆಮಾ ಮುಹೂರ್ತ ಮಾಡಲಾಗಿದ್ದು, ಮುಂದಿನ ವರ್ಷ ತೆರೆ ಕಾಣಲಿದೆ. ಯುವ ನಿರ್ದೇಶಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ನಿರ್ದೇಶಕ ಶಶಿರಾಜ್ ಕಾವೂರು ರಚಿಸಿರುವ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನವಿರುವ ವಾದಿರಾಜ ವಾಲಗ ಮಂಡಳಿ ಕನ್ನಡ ಸಿನೆಮಾ ನಿರ್ಮಾಣ ಮಾಡುತ್ತಿದ್ದೇವೆ ಎಂದರು.
ಹಲವು ಹಿಟ್ ಕನ್ನಡ, ತಮಿಳು ಸಿನೆಮಾಗಳ ಛಾಯಾಚಿತ್ರಗಾರ ಎಸ್. ಚಂದ್ರಶೇಖರನ್ ಕ್ಯಾಮೆರಾ ಕೈ ಚಳಕವಿದ್ದು, ಚಿತ್ರಕ್ಕೆ ಸಂಗೀತ ಮಣಿಕಾಂತ ಕದ್ರಿಯವರದ್ದು. ಬ್ರಹ್ಮಾವರ. ಕಾಸರಗೋಡು, ಮಂಗಳೂರು, ಉಡುಪಿ ಆಸುಪಾಸಿನ ಪರಿಸರದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿದರು.
ನಿರ್ದೇಶಕ ಶಶಿರಾಜ್ ರಾವ್ ಕಾವೂರು ಮಾತನಾಡಿ, ಕರಾವಳಿಯ ಪ್ರತಿಭಾವಂತ ರಂಗಭೂಮಿ ಕಲಾವಿದರ ಮುಖ್ಯ ಭೂಮಿಕೆಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, 300 ವರ್ಷಗಳ ಇತಿಹಾಸವುಳ್ಳ ಬ್ರಹ್ಮಾವರ ತೆಂಕುಮನೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. 15 ದಿನಗಳ ಚಿತ್ರೀಕರಣದ ಬಳಿಕ ಮಂಗಳೂರು ಅಲ್ಲಿಂದ ಟ್ರಾವೆಲ್ ಶೂಟಿಂಗ್ ಮಂಜೇಶ್ವರದಲ್ಲಿ ನಡೆಯಲಿದೆ. ನಿರ್ಮಾಪಕರು, ನಟರ ಸಂಪೂರ್ಣ ಸಹಕಾರವಿದ್ದು, 50 ದಿನದಲ್ಲಿ ಶೂಟಿಂಗ್ ಮುಗಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೇಘರಾಜ್ ಆರ್. ಜೈನ್, ಛಾಯಾಚಿತ್ರಗಾರ ಎಸ್.ಚಂದ್ರಶೇಖರನ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ, ವಿನಯ್ ಕುಮಾರ್ ಸೂರಿಂಜೆ, ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೊಟ್ಟು , ಮಹೇಶ್ ಹೆಗ್ಡೆ ಎಂ., ರವೀಂದ್ರ ಕಂಬಳಿ, ಕಾರ್ಯಕಾರಿ ನಿರ್ಮಾಪಕ ಸಂತೋಷ್ ಶೆಟ್ಟಿ, ನಟ ಗೋಪಿನಾಥ್ ಭಟ್, ಸುನಿಲ್ ಕುಮಾರ್ ಬಜಗೋಳಿ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here