Thursday, November 21, 2024

ನ. 2ರಿಂದ 4ರ ವರೆಗೆ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Must read

ಉಡುಪಿ: ರಾಜ್ಯಮಟ್ಟದ 14 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಅಥ್ಲೆಟಿಕ್ಸ್ ಕ್ರಿಡಾಕೂಟವು ನವೆಂಬರ್ 2 ರಿಂದ 4 ರ ವರೆಗೆ ಉಡುಪಿ ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದರು.

ಮಣಿಪಾಲ‌ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 3000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಆಗಮಿಸುವ ಎಲ್ಲಾ ಕ್ರೀಡಾಪಟುಗಳು, ಶಿಕ್ಷಕರಿಗೆ ತಂಗಲು ವಸತಿ ವ್ಯವಸ್ಥೆ, ಊಟೋಪಚಾರ, ವಾಹನದ ವ್ಯವಸ್ಥೆ ಸೇರಿದಂತೆ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳುವುದರೊಂದಿಗೆ ಯಾವುದೇ ಕೊರತೆಗಳು ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.

ವಿವಿಧ ಜಿಲ್ಲೆಯನ್ನು ಪ್ರತಿನಿಧಿಸಲು ಅರ್ಹತೆ ಪಡೆದಿರುವ ಕ್ರೀಡಾಪಟುಗಳ ಪ್ರವೇಶ ಪತ್ರ ಹಾಗೂ ಪೂರಕ ಮಾಹಿತಿಯನ್ನು ನವೆಂಬರ್ 1 ರ ಒಳಗಾಗಿ ಪಡೆದುಕೊಳ್ಳುವುದರೊಂದಿಗೆ ನವೆಂಬರ್ 2 ರಂದು ಆಗಮಿಸುವ ಕ್ರೀಡಾಪಟುಗಳ ನೊಂದಣಿ ಮಾಡಿಕೊಳ್ಳಲು ಸೈಂಟ್ ಸಿಸಿಲೀಸ್ ಪ್ರೌಢಶಾಲೆಯಲ್ಲಿ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದ ಹೇಳಿದರು.

ಕ್ರೀಡಾಕೂಟಕ್ಕೆ ಹೆಚ್ಚು ಜನರು ಆಗಮಿಸುತ್ತಿರುವ ಹಿನ್ನೆಲೆ, ಅವರಿಗೆ ಅಗತ್ಯವಿರುವ ಕುಡಿಯುವ ನೀರು, ನೈರ್ಮಲ್ಯದ ವ್ಯವಸ್ಥೆಯನ್ನು ಸ್ಥಳೀಯ ನಗರಸಭೆ ವತಿಯಿಂದ ಹಾಗೂ ತುರ್ತು ಚಿಕಿತ್ಸೆಗೆ ವೈದ್ಯಕೀಯ ವ್ಯವಸ್ಥೆಯನ್ನು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಡಬೇಕೆಂದು ಸೂಚನೆ ನೀಡಿದರು.

ಕ್ರೀಡಾಪಟುಗಳ ಭದ್ರತೆ, ಶಿಸ್ತು ಹಾಗೂ ಶಾಂತಿ ಪಾಲನೆಗೆ ಸ್ವಯಂ ಸೇವಕರುಗಳನ್ನು ನಿಯೋಜಿಸಬೇಕು. ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯವನ್ನು ಪಡೆಯಬೇಕು. ಕ್ರೀಡಾಚಟುವಟಿಕೆಗೆ ಸರಕಾರ ನೀಡಿರುವ ಅನುದಾನದ ಜೊತೆಗೆ ಸ್ಥಳೀಯ ಸಂಸ್ಥೆಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ನಗರಸಭೆ ಪೌರಾಯುಕ್ತ ರಾಯಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಮಾಜಿ ನಗಸರಭಾ ಅಧ್ಯಕ್ಷೆ ಸಮಿತ್ರಾ ಆರ್ ನಾಯಕ್ ನಗರಸಭಾ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here