Sunday, January 11, 2026

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಕೋಟ್ಯಾಂತರ ರೂ. ವಂಚನೆ ಪ್ರಕರಣದ ತನಿಖೆ ವಿಳಂಬ; ಫೆ.22ರಿಂದ ರೈತ ಸಂಘದಿಂದ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ

Must read

ಉಡುಪಿ: ಬ್ರಹ್ಮಾವರದ ದ.ಕ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2021-22 ರ ನಡುವಿನ ಅವಧಿಯಲ್ಲಿ ನಡೆದಿರುವ 14 ಕೋಟಿ ರೂ. ವಂಚನೆ ಪ್ರಕರಣದ ತನಿಖೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ಫೆ.22ರಂದು ಬೆಳಿಗ್ಗೆ 9.30ರಿಂದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗೇಟಿನ ಬಳಿಯಲ್ಲಿ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ ನಡೆಸಲು ಉಡುಪಿ ಜಿಲ್ಲಾ ರೈತ ಸಂಘ ನಿರ್ಧರಿಸಿದೆ.

ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಮಾತನಾಡಿ, ಈ ಧರಣಿ ಸತ್ಯಾಗ್ರಹದಲ್ಲಿ ಪ್ರತಿದಿನ ಕನಿಷ್ಠ 25 ಜನರಂತೆ, ಮೂರು ತಿಂಗಳು ಅಹೋರಾತ್ರಿ ಧರಣಿ ನಡೆಸಲು ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
ದ‌‌‌.ಕ ಜಿಲ್ಲಾ ಸಕ್ಕರೆ ಕಾರ್ಖಾನೆಯ ಸದಸ್ಯರು, ವಿವಿಧ ರೈತಪರ ಸಂಘಟನೆಗಳು, ಸಹಕಾರಿ ಕ್ಷೇತ್ರದ ಸಹಕಾರಿ ಪ್ರಮುಖರು, ಪಂಚಾಯತ್ ರಾಜ್ ಒಕ್ಕೂಟದ ಪ್ರತಿನಿಧಿಗಳು, ಪ್ರಾಂತೀಯ ರೈತ ಸಂಘವು ಬೆಂಬಲಿಸಿ, ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ನ್ಯಾಯಾಲಯದ ಆದೇಶದಂತೆ ಬ್ರಹ್ಮಾವರ ಠಾಣೆಯಲ್ಲಿ 2023 ರ ಅ.25 ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಅಧಿಕಾರಿಗಳು ಆರೋಪಿಗಳಾಗಿರುವುದರಿಂದ ತನಿಖೆ ನಡೆಸಲು ಸರ್ಕಾರದ ಪೂರ್ವಾನುಮತಿಯನ್ನು ಪಡೆಯಲು 2024ರ ಆ.14 ರಂದು ಪೋಲಿಸ್ ಇಲಾಖೆ ರಾಜ್ಯ ಸರಕಾರದ ಒಳಾಡಳಿತ ಇಲಾಖೆಯನ್ನು ಕೋರಿದ್ದರೂ ಈ ತನಕ ಅಲ್ಲಿಂದ ಪೂರ್ವಾನುಮತಿ ದೊರೆತಿಲ್ಲ. ಇದು ಸರಕಾರದ ಮೃದುಧೋರಣೆ ಎಂದು ಅವರು ಕಿಡಿಕಾರಿದರು.

ಪ್ರತಿ ಹಂತದಲ್ಲೂ ತನಿಖೆಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅನ್ಯಾಯಕ್ಕೆ ಪ್ರತಿರೋಧ ತೋರಿಸುವ ನಿಟ್ಟಿನಲ್ಲಿ ಮತ್ತು ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿರುವವರನ್ನು ಸಮಗ್ರ ತನಿಖೆಗೆ ಒಳಪಡಿಸಿ, ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಂಬದಕೋಣೆ ಸಹಕಾರಿ ಪತ್ತಿನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ರೈತ ಮುಖಂಡರಾದ ಸದಾನಂದ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಭೋಜ ಕುಲಾಲ್ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here