ಉಡುಪಿ: ಹೆಜಮಾಡಿ ಹಾಗೂ ಸಾಸ್ತಾನ ಟೋಲ್ ಗೇಟ್ ನಲ್ಲಿ ಜಿವಿಡಬ್ಲ್ಯೂ7500ರಿಂದ 1200 ಕೆ.ಜಿ. ಯವರೆಗಿನ ಮಿನಿ ಬಸ್ ಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಖಾಸಗಿ ಬಸ್ ಮಾಲಕರ ಸಂಘದ ನೇತೃತ್ವದಲ್ಲಿ ಇದೇ ಫೆ.5ರಂದು ಟೋಲ್ ಗೇಟ್ ನಲ್ಲಿ ಪ್ರತಿಭಟನೆ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ ಅವರು, ಹೆಜಮಾಡಿ ಹಾಗೂ ಸಾಸ್ತಾನ ಟೋಲ್ ಗೇಟ್ ನಲ್ಲಿ ಕಾನೂನುಬಾಹಿರವಾಗಿ ನಮ್ಮ ಟೋಲ್ ವಾಲೆಟ್ ನಲ್ಲಿ ಇರುವ ಹಣವನ್ನು ಹೆಚ್ಚುವರಿಯಾಗಿ ಕಡಿತಗೊಳಿಸಲಾಗುತ್ತಿದೆ. ಒಂದು ದಿನಕ್ಕೆ ಸುಮಾರು 8 ರಿಂದ 10 ಲಕ್ಷ ರೂ.ಗಳನ್ನು ಬಸ್ ಮಾಲಕರಿಂದ ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಫೆ.5ರಂದು ಟೋಲ್ ಗೇಟ್ ಗಳ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಕರಾವಳಿ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್, ಕೋಶಾಧಿಕಾರಿ ಇಮ್ತಿಯಾಜ್ ಅಹಮದ್, ಸದಸ್ಯರಾದ ಇಮ್ರಾನ್, ಸಂದೀಪ್ ಇದ್ದರು.