ಉಡುಪಿ: ಮಾರ್ಚ್ 3ರಿಂದ 6ರ ವರೆಗೆ ನಡೆಯಲಿರುವ ಆತ್ರಾಡಿ ಸಮೀಪದ ಪರೀಕ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆಗೊಳಿಸಿದರು.
ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ದೇವಳದ ಆವರಣದಲ್ಲಿ ನಡೆದ ಪೂರ್ವಸಿದ್ಧತೆ ಸಭೆಯಲ್ಲಿ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು, ಜನರಲ್ಲಿ ಭಕ್ತಿ ಶಕ್ತಿಯ ಜಾಗೃತಿಗಾಗಿ ದೇವಳದ ಜೀರ್ಣೋದ್ಧಾರದಂಥ ಕಾರ್ಯಕ್ರಮ ಅಗತ್ಯ. ಮನುಷ್ಯನ ಪ್ರಯತ್ನದೊಂದಿಗೆ ದೈವಾನುಗ್ರಹ ಇದ್ದಲ್ಲಿ ಹಮ್ಮಿಕೊಂಡ ಕಾರ್ಯ ಸುಗಮವಾಗುತ್ತದೆ. ಊರವರ ಸಹಕಾರದಿಂದ ಕ್ಷೇತ್ರದ ವತಿಯಿಂದ ಸಂಭ್ರಮದಿಂದ ಬ್ರಹ್ಮಕುಂಭಾಭಿಷೇಕ ಮಹೋತ್ಸವವನ್ನು ವೈಭವದಿಂದ ನಡೆಸಲಾಗುವುದು ಎಂದರು.
ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ, ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರಕುಮಾರ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಳಾಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳದ ಅರ್ಚಕ ರಾಮಕೃಷ್ಣ ಕಲ್ಲೂರಾಯ ವೇದಘೋಷಗೈದರು. ಪರೀಕ ಕ್ಷೇತ್ರದ ತಂತ್ರಿ ಹೆರ್ಗ ಜಯರಾಮ ತಂತ್ರಿ ಶುಭಾಶಂಸನೆಗೈದರು. ಸ್ಥಳೀಯರಾದ ಹೃಷಿಕೇಶ ಹೆಗ್ಡೆ ಮತ್ತು ಇಸ್ಮಾಯಿಲ್ ಆತ್ರಾಡಿ ಮಾತನಾಡಿದರು.