ಉಡುಪಿ: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಒಮ್ಮತದಿಂದ ನಡೆಯಬೇಕು ಎಂಬುದು ನಮ್ಮ ಉದ್ದೇಶ. ನಮಗೆ ಹಾಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಲ್ಲದೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಇವರಿಬ್ಬರ ಸಹಕಾರ ಕೂಡಾ ನಮಗೆ ಅಗತ್ಯವಿದೆ. ರಾಜಕೀಯ ರಹಿತವಾಗಿ ದೇವಳದ ಜೀರ್ಣೋದ್ಧಾರ ನಡೆಯಬೇಕು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜ್ ಕುಮಾರ್ ಶೆಟ್ಟಿ ದೊಡ್ಮನೆ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವಾರದಲ್ಲೇ ನಮ್ಮ ಜೀರ್ಣೋದ್ಧಾರ ಸಮಿತಿ ರದ್ದಾಯಿತು ಎಂಬ ಸುರೇಶ್ ಶೇರ್ವೆಗಾರ್ ಅವರ ಆರೋಪ ಸತ್ಯಕ್ಕೆ ದೂರವಾಗಿದೆ. ಕಾಂಗ್ರೆಸ್ ಸರಕಾರ ಬರುವ ಮೊದಲೇ ಜೀರ್ಣೋದ್ಧಾರ ಸಮಿತಿ ರದ್ದಾಗಿತ್ತು. ವಿಶೇಷವೆಂದರೆ ಅವರದ್ದೇ ವ್ಯವಸ್ಥಾಪನಾ ಸಮಿತಿ ಅಸ್ತಿತ್ವದಲ್ಲಿತ್ತು. ಈ ಸಮಿತಿಗಳ ಒಳಜಗಳದಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆತುತ್ತಿರಲಿಲ್ಲ. ನಾವು ಕೆಲಸ ಮಾಡದ ಈ ಸಮಿತಿಯನ್ನು ಬರ್ಖಾಸ್ತುಗೊಳಿಸುವಂತೆ ಧಾರ್ಮಿಕದತ್ತಿ ಆಯುಕ್ತರಿಗೆ ಪತ್ರ ಬರೆದಿದ್ದೆವು ಎಂದು ಅವರು ಸ್ಪಷ್ಟಪಡಿಸಿದರು.
ದೇವಳದ ಜೀರ್ಣೋದ್ಧಾರದ ವಿಷಯದಲ್ಲಿ ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರು ಹೇಳಿದ್ದಕ್ಕೆ ತಲೆಯಾಡಿಸಬಾರದು. ಅವರು ಬಿಜೆಪಿಗೆ ಮಾತ್ರ ಶಾಸಕರಲ್ಲ ನಮಗೂ ಶಾಸಕರು. ನಮ್ಮದು ಸಮತೋಲನಾ ವ್ಯವಸ್ಥಾಪನಾ ಸಮಿತಿ ಸರ್ವರ ಸಹಕಾರ ಬಯಸುತ್ತಿದೆ. ಹಿಂದಿನ ಜೀಣೋದ್ಧಾರ ಸಮಿತಿಯು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಅವರ ಮೇಲೆ ಮಾಡಿರುವ ಆರೋಪ ಸಂಪೂರ್ಣ ಸುಳ್ಳಾಗಿದೆ ಎಂದರು.
ಮಾಜಿ ಶಾಸಕ ಲಾಲಾಜಿ ಮೆಂಡನ್ ಅವರಿಗೆ ವೇದಿಕೆಯಲ್ಲಿಯೇ ಅವಮಾನ ಮಾಡಿರುವ ಆರೋಪವನ್ನು ಅಲ್ಲಗಳೆದ ಅವರು, ಲಾಲಾಜಿ ಮೆಂಡನ್ ಅವರು ಕಾಪು ಕ್ಷೇತ್ರಕ್ಕೆ ಉತ್ತಮ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನಮಗೆ ತುಂಬಾ ಗೌರವವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ, ಸಮಿತಿಯ ತಾಂತ್ರಿಕ ಸಲಹೆಗಾರ ಸಂತೋಷ್ ಕುಲಾಲ್ ಪಕ್ಕಾಲು, ಸದಸ್ಯರಾದ ದಿನೇಶ್ ಪೂಜಾರಿ, ಲಲಿತಾಂಬಾ ಉಪಸ್ಥಿತರಿದ್ದರು.
ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಒಮ್ಮತದಿಂದ ನಡೆಯಲಿ- ರಾಜ್ ಕುಮಾರ್ ಶೆಟ್ಟಿ ದೊಡ್ಮನೆ
More articles

