ಉಡುಪಿ: ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದಲ್ಲಿ ಇದೇ ಜ.25ರಿಂದ 27ರ ವರೆಗೆ ಮೂರು ದಿನಗಳ “ಫಲಪುಷ್ಪ ಪ್ರದರ್ಶನ-2025” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.
ಈ ಕುರಿತು ಪುಷ್ಪ ಹರಾಜು ಕೇಂದ್ರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಲಾಗಿದೆ. ಇದರಲ್ಲಿ ಪೆಟೂನಿಯ, ಸೆಲೋಷಿಯಾ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ ಆಸ್ಟರ್, ಬಾಲ್ಸಮ್, ತೊರೇನಿಯ, ಯುಜೀನಿಯಾ, ಗುಲಾಬಿ, ಟೆಕೋಮಾ, ದಾಸವಾಳ, ಪ್ಯಾನ್ಸಿ, ಇಂಪೇಷಿಯನ್ಸ್ ಮೊದಲಾದ 23 ಜಾತಿಯ 7 ಸಾವಿರ ಹೂವಿನ ಗಿಡಗಳನ್ನು ಜೋಡಿಸಲಾಗುವುದು ಎಂದರು.
ಈ ಪ್ರದರ್ಶನದಲ್ಲಿ ಸುಮಾರು 1.25ಲಕ್ಷ ಸಂಖ್ಯೆಯ ಗುಲಾಬಿ, ಸೇವಂತಿಗೆ, ಆರ್ಕಿಡ್ಸ್, ಲಿಲಿಯಮ್ ಮೊದಲಾದ ಹೂವುಗಳನ್ನು ಬಳಸಿ ವಿವಿಧ ಕಲಾಕೃತಿಗಳನ್ನು ತಯಾರಿಸಲಾಗುವುದು. ಅಲ್ಲದೆ, ವಿವಿಧ ಪುಷ್ಪಗಳನ್ನು ಉಪಯೋಗಿಸಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪುಷ್ಪ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು. ಹೂವಿನಲ್ಲಿ ಅರಳಿದ ಕರ್ನಾಟಕದ ಕಲಾಕೃತಿ, ಹೂವುಗಳಿಂದ ತಯಾರಿಸಿದ ಸೆಲ್ಫಿ ಝೋನ್ ಮಾದರಿ, ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ ಹಾಗೂ ಹೂವಿನ ಕುಂಡಗಳ ಜೋಡಣೆ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಜ. 25ರಂದು ಕೈತೋಟ ಮತ್ತು ತಾರಸಿ ತೋಟ ನಿರ್ಮಾಣ ಮತ್ತು ನಿರ್ವಹಣೆ ಹಾಗೂ ಜ. 26ರಂದು ಕರಾವಳಿಗೆ ಸೂಕ್ತವಾದ ಹೊಸ ತೋಟಗಾರಿಕೆ ಬೆಳೆಗಳ ಕುರಿತ ವಿಚಾರ ಸಂಕಿರಣವನ್ನು ಆಯೋಜಿಸಲಾಗುವುದು. ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆಯನ್ನು ತೆರೆಯಲಾಗುವುದು. ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬೆಳಿಗ್ಗೆ 10ರಿಂದ ಸಂಜೆ 8 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಜ.25ರಂದು ಬೆಳಿಗ್ಗೆ 9.30ಕ್ಕೆ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಓ ಪ್ರತೀಕ್ ಬಾಯಲ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಇದ್ದರು.