ಉಡುಪಿ: ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸೆನ್ ಪೊಲೀಸರು ಮರವಂತೆ ಬೀಚ್ ಬಳಿ ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಭಟ್ಕಳ ನಿವಾಸಿಗಳಾದ ಅಬ್ರಾರ್ ಶೇಖ್ (22), ಮೊಹಮ್ಮದ್ ಇಸ್ಮಾಯಿಲ್ ಫರ್ಹಾನ್ (25) , ಮೊಹಮ್ಮದ್ ಜಿಯಾಮ್ ಬೆಳ್ಳಿ (26), ನೌಮನ್ (27) ಮತ್ತು ಹೊನ್ನಾವರ ನಿವಾಸಿ ಸಜ್ಜಾದ್ ಮುಸ್ತಕೀಮ್ ಕೆವಾಕ (21) ಎಂದು ಗುರುತಿಸಲಾಗಿದೆ. ಬಂಧಿತರಿಂದ 78,000 ರೂ. ಮೌಲ್ಯದ 15 ಗ್ರಾಂ 59 ಮಿಲಿ ಗ್ರಾಂ ತೂಕದ ಎಂಡಿಎಂಎ ಪೌಡರ್, 50ಸಾವಿರ ರೂ. ಮೌಲ್ಯದ ಐದು ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 11,28,000ರೂ. ಎಂದು ಅಂದಾಜಿಸಲಾಗಿದೆ.
ಆರೋಪಿ ಅಬ್ರಾರ್ ಶೇಖ್ ಎಂಡಿಎಂಎ ಪೌಡರ್ನ್ನು ಬೆಂಗಳೂರಿನ ದಾವೂದ್ ಮತ್ತು ಇಸಾಕ್ ಅವರಿಂದ ಖರೀದಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.