Tuesday, December 3, 2024

ಮೀನುಗಾರಿಕೆ ಸಚಿವರೊಂದಿಗೆ ಮಲ್ಪೆ ಮೀನುಗಾರರ ನಿಯೋಗದ ಸಭೆ

Must read

ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನ ಹಲವು ಸಮಸ್ಯೆ ಹಾಗೂ ಮೀನುಗಾರಿಕೆ ಸಂಬಂಧಿಸಿದ ಹಲವು ತುರ್ತು ಬೇಡಿಕೆಗಳ ಬಗ್ಗೆ ಕರ್ನಾಟಕದ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಮಾಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಮಲ್ಪೆ ಮೀನುಗಾರ ಸಂಘದ ನಿಯೋಗ ಸಭೆ ನಡೆಸಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದರು.

ಸಭೆಯಲ್ಲಿ ಮಲ್ಪೆ ಮಹಿಳಾ ಮೀನುಗಾರ ಸಂಘದ ಒಣ ಮೀನು ವ್ಯಾಪಾರಕ್ಕೆ ನಿವೇಶನ ಮಂಜೂರು, ಬಂದರಿನಲ್ಲಿ ಸುಗಮ ಮೀನುಗಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರಂತರವಾಗಿ ಡ್ರೆಜ್ಜಿಂಗ್ ನಡೆಸಿ ಹೂಳು ತೆರವು, ಮೀನುಗಾರಿಕೆ ಅವಘಡ ಸಂದರ್ಭದಲ್ಲಿ ವಿಮಾ ಪರಿಹಾರ ಮೊತ್ತ ಬಿಡುಗಡೆ ಪ್ರಕ್ರಿಯೆ ನಿಯಮಾವಳಿ ಸರಳೀಕರಣ, ನಾಡದೋಣಿ ಹಾಗೂ ಯಾಂತ್ರೀಕೃತ ಬೋಟ್ ಗಳಿಗೆ ಸ್ಥಳದ ಕೊರತೆ ಹಿನ್ನೆಲೆ ಪ್ರಸ್ತಾವಿತ ನೂತನ ಜೆಟ್ಟಿ ನಿರ್ಮಾಣಕ್ಕೆ ಆದ್ಯತೆ, ಗೋವಾ ಮಹಾರಾಷ್ಟ್ರ ಕೇರಳ ಸಹಿತ ನೆರೆ ರಾಜ್ಯಗಳೊಂದಿಗೆ ಸಮನ್ವಯತೆ ಮೂಲಕ ಸುಗಮ ಮೀನುಗಾರಿಕೆ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ಏಕರೂಪ ಮೀನುಗಾರಿಕೆ ನೀತಿ ಜಾರಿ, 4ನೇ ಹಂತದ ಬಂದರು ಅಭಿವೃದ್ಧಿಗಾಗಿ ಟೆಬ್ಮಾ ಶಿಪ್ ಯಾರ್ಡ್ ಬಳಿಯ ಸ್ಥಳವನ್ನು ಮೀನುಗಾರಿಕೆ ಉದ್ದೇಶಕ್ಕೆ ಮೀಸಲಿರಿಸುವ ಬಗ್ಗೆ ಸಚಿವರಲ್ಲಿ ಮೀನುಗಾರರ ಪರವಾಗಿ ಶಾಸಕ ಯಶ್ ಪಾಲ್ ಸುವರ್ಣ ಸಚಿವರಿಗೆ ಮನವಿ ಮಾಡಿದರು.

ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ ಮಲ್ಪೆ ಮೀನುಗಾರಿಕೆ ಬಂದರಿನ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ನಿಯೋಗದ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವ ಮಾಂಕಾಳ ವೈದ್ಯ ಮೀನುಗಾರ ಬೇಡಿಕೆ ಹಾಗೂ ಸಮಸ್ಯೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಆದ್ಯತೆಯ ಮೇರೆಗೆ ಪರಿಹರಿಸಲು ಬದ್ದನಿದ್ದು, ಶೀಘ್ರದಲ್ಲಿ ಮಲ್ಪೆ ಬಂದರಿಗೆ ಭೇಟಿ ನೀಡಿ ಮೀನುಗಾರಿಕೆ ಪೂರಕ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ವಹಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಮೀನುಗಾರಿಕೆ ಇಲಾಖೆ ನಿರ್ದೇಶಕರಾದ ದಿನೇಶ್ ಕಲ್ಲೇರ್, ಕೂಳೂರು ಮೊಗವೀರ ಸಂಘದ ಅಧ್ಯಕ್ಷರಾದ ಭರತ್ ಹಾಗೂ ಮಲ್ಪೆ ಯಾಂತ್ರಿಕ ಟ್ರಾಲ್ ಬೋಟ್ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷರಾದ ನಾಗರಾಜ ಸುವರ್ಣ, ಡೀಪ್ ಸೀ ಟ್ರಾಲ್ ಬೋಟ್ ಸಂಘದ ಅಧ್ಯಕ್ಷರಾದ ಸುಭಾಷ್ ಮೆಂಡನ್, ಮಹಿಳಾ ಮೀನುಗಾರರ ಸಂಘದ ಅಧ್ಯಕ್ಷರಾದ ಸುಮಿತ್ರಾ, ಮೀನುಗಾರರ ಸಂಘದ ಕಾರ್ಯದರ್ಶಿ ಜಗನ್ನಾಥ, ಮೀನುಗಾರ ಪ್ರಕೋಷ್ಠದ ಅಧ್ಯಕ್ಷರಾದ ಮಂಜುನಾಥ ಸಾಲ್ಯಾನ್, ಯಾಂತ್ರಿಕ ಟ್ರಾಲ್ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶ್ ಬಂಗೇರ ಹಾಗೂ ಮೀನುಗಾರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here