ಉಡುಪಿ: ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ “ಶತಾಭಿವಂದನಂ’ ಸಮಾರೋಪ ಸಂಭ್ರಮವು ಅ. 27ರ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಟಿ. ಸತೀಶ್ ಶೆಟ್ಟಿ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಶತಮಾನೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಣಿಪಾಲ ಡಾ. ಟಿಎಂಎ ಪೈ ಫೌಂಡೇಶನ್ ಅಧ್ಯಕ್ಷ ಅಶೋಕ್ ಪೈ ಕೊಡುಗೆ ಹಸ್ತಾಂತರಿಸಲಿದ್ದಾರೆ. ಕೆಮ್ಮಣ್ಣು ಸಂತ ತೆರೇಸಾ ಚರ್ಚ್‌ನ ಧರ್ಮಗುರು ಫಿಲಿಪ್ ನೇರಿ ಅರಾನ್ಹ ಶುಭಾಶಂಸನೆಗೈಯಲಿದ್ದಾರೆ ಎಂದರು.
ಸಭಾಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 8ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ಬಳಿಕ 9ಗಂಟೆಗೆ ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಸಹಕಾರಿ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್, ಶಾಸಕ ಯಶ್‌ಪಾಲ್ ಎ. ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಜಿ.ಟಿ. ದೇವೇಗೌಡ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕುಂದಾಪುರ ಸಹಕಾರ ಸಂಘಗಳ ನಿವೃತ್ತ ಉಪನಿಬಂಧಕ ಅರುಣ್ ಕುಮಾರ್ ಎಸ್.ವಿ., ಹಿರಿಯ ಸಹಕಾರಿ ಸರಳಾ ಬಿ. ಕಾಂಚನ್, ಯೋಧ ಕಿಶನ್ ಹಾಗೂ ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು, ನಿವೃತ್ತ ಸಿಬ್ಬಂದಿ ವರ್ಗದವರನ್ನು ಗೌರವಿಸಲಾಗುವುದು. ಸಭಾಕಾರ್ಯಕ್ರಮದ ಬಳಿಕ ಯಕ್ಷನಾಟ್ಯ ವೈಭವ, ಮಧ್ಯಾಹ್ನ 1.30ಕ್ಕೆ ತೋನ್ಸೆ ಪುಷ್ಕಳ ಕುಮಾರ್ ಅವರಿಂದ ಸಂಗೀತ ರಸಮಂಜರಿ, ಮಧ್ಯಾಹ್ನ 3.30ಕ್ಕೆ ಕುದ್ರೋಳಿ ಗಣೇಶ್ ಅರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಫ್ಜಲ್ ಸಾಹೇಬ್, ನಿರ್ದೇಶಕರಾದ ರಾಘವೇಂದ್ರ ಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಸಾಲ್ಯಾನ್ ಹಾಗೂ ಶಾಖಾ ವ್ಯವಸ್ಥಾಪಕ ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು.