ಉಡುಪಿ: ಭಾರೀ ವಿವಾದಕ್ಕೀಡಾಗಿರುವ ಇಂದ್ರಾಳಿ ಬ್ರಿಡ್ಜ್ ಕಾಮಗಾರಿ ಅವ್ಯವಸ್ಥೆಯ ವಿರುದ್ದ ಹೋರಾಟ ಸಮಿತಿ ಪ್ರತಿಭಟನೆಗೆ ಸಜ್ಜುಗೊಳ್ಳುತ್ತಿದ್ದಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಯಶ್ ಪಾಲ್ ಸುವರ್ಣ ಅವರು ಕಾಮಗಾರಿ ಪ್ರದೇಶಕ್ಕೆ ದೌಡಾಯಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಉಡುಪಿ- ಮಣಿಪಾಲ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ರೈಲ್ವೇ ಬ್ರಿಡ್ಜ್ ಕಾಮಗಾರಿ ಜನಪ್ರತಿನಿಧಿಗಳ ಅಸಡ್ಡೆ ಹಾಗೂ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿತ್ತು. ಇದರಿಂದ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದ್ದು, ನಿತ್ಯ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದರು.
ಹಲವು ಬಾರಿ ಉಡುಪಿಯ ಜನಪ್ರತಿನಿಧಿಗಳು ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ, ಕಾಮಗಾರಿ ಪೂರ್ಣಗೊಳಿಸುವುದಾಗಿ ಪೊಳ್ಳು ಭರವಸೆ ನೀಡಿ ಯಾಮಾರಿಸುತ್ತಿದ್ದರು. ಆದರೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ ಬೇಸತ್ತ ಜನ ಹೋರಾಟ ಸಮಿತಿ ರಚಿಸಿ ಅಕ್ಟೋಬರ್ 29ರಂದು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಸದ ಕೋಟ ಹಾಗೂ ಶಾಸಕ ಯಶ್ ಪಾಲ್ ಅವರು ಇಂದು ದಿಢೀರ್ ಇಂದ್ರಾಳಿ ಬ್ರಿಡ್ಜ್ ಬಳಿ ದೌಡಾಯಿಸಿ ಕಾಮಗಾರಿ ವೀಕ್ಷಣೆ ಮಾಡಿ, ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು, 2018ರಲ್ಲಿ ಈ ಕಾಮಗಾರಿ ಆರಂಭವಾಗಿದೆ. ರೈಲ್ವೆ ಇಲಾಖೆಯ ಅನುಮತಿಯ ಗೊಂದಲದಿಂದ ಕಾಮಗಾರಿ ವಿಳಂಬವಾಗಿದೆ. 138 ಟನ್ ತೂಕದ ಗರ್ಡರ್ ಅಳವಡಿಸುವ ಯೋಜನೆ ಇದಾಗಿದ್ದು, ರಸ್ತೆ ಉದ್ದ 38 ಮೀಟರ್ ನಿಂದ 58 ಮೀಟರ್ ಗೆ ವಿಸ್ತರಣೆಯಾಗಿದೆ. ಗರ್ಡರ್ ಗಳಿಗೆ ಅಳವಡಿಸುವ ಸ್ಟೀಲ್ 420 ಟನ್ ಗೆ ಏರಿಕೆಯಾಗಿದೆ. ಹೀಗಾಗಿ ವಿಳಂಬವಾಗಿದೆ ಎಂದರು.
ಕಾಮಗಾರಿಗೆ ಬೇಕಾದ ಎಲ್ಲ ಸಮಾಗ್ರಿಗಳು ಬಂದಿವೆ. ಜನವರಿ ಹದಿನೈದರೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎಂದರು.