ಉಡುಪಿ: ಪದೇ ಪದೇ ಅಪರಾಧ ಪ್ರಕರಣಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಉಡುಪಿ ನಗರಸಭೆ ವ್ಯಾಪ್ತಿಯ ಮಣಿಪಾಲದ ಈಶ್ವರ ನಗರದಲ್ಲಿರುವ ಕಟ್ಟಡ ಸಂಖ್ಯೆ 4-94E4 ರಲ್ಲಿ ನಡೆಸುತ್ತಿರುವ Dee-Tee (ಭವಾನಿ) ಲಾಡ್ಜಿಂಗ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಮಣಿಪಾಲ-ಪೆರಂಪಳ್ಳಿ ರಸ್ತೆಯ ಕಟ್ಟಡ ಸಂಖ್ಯೆ 2-7E, E1, E2, E3, E4, E5ರಲ್ಲಿ ಶಾಂಭವಿ ಅಸೋಸಿಯೇಟ್ಸ್ ನ 7th Heaven (Ecstays) ಬಾರ್ ಆ್ಯಂಡ್ ರೆಸ್ಟೋರೆಂಟ್ ನ ಉದ್ದಿಮೆ ಪರವಾನಿಗೆಯನ್ನು ನಗರಸಭೆ ರದ್ದುಪಡಿಸಿದೆ.
Dee-Tee(ಭವಾನಿ) ಹಾಗೂ 7th Heaven (Ecstays), ಎಂಬ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರಿಗೆ ತಡರಾತ್ರಿವರೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಬಾರ್ ಆ್ಯಂಡ್ ರೆಸ್ಟೋರೆಂಟ್ ನಿರ್ವಹಣೆ ವೇಳೆ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಇರುವುದರಿಂದ ಮತ್ತು ಪದೇ ಪದೇ ಅಪರಾಧ ಪ್ರಕರಣಗಳು ನಡೆಯುತ್ತಿರುವುದರಿಂದ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಉದ್ದಿಮೆಯ ಪರವಾನಿಗೆಯನ್ನು ರದ್ದುಪಡಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಉಡುಪಿ ನಗರಸಭೆ ಎರಡು ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳ ಪರವಾನಿಗೆ ರದ್ದುಪಡಿಸಿದೆ.
Dee-Tee(ಭವಾನಿ) ಲಾಡ್ಜಿಂಗ್ ಆ್ಯಂಡ್ ರೆಸ್ಟೋರೆಂಟ್ ಗೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯಲ್ಲಿ ಒಟ್ಟು ಐದು ಪ್ರಕರಣ ದಾಖಲಾಗಿದೆ. 7th Heaven ಬಾರ್ ಆ್ಯಂಡ್ ರೆಸ್ಟೋರೆಂಟ್ ಗೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯಲ್ಲಿ 2024ನೇ ಸಾಲಿನಲ್ಲಿ ಡಿಜೆ ಬಳಸಿ ಪಾರ್ಟಿ ನಡೆಸುತ್ತಿರುವ ಬಗ್ಗೆ ದಾಖಲಾದ ಒಂದು ಪ್ರಕರಣ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು, ಮುಂಬೈಯಲ್ಲಿ ಒಂದು ಪ್ರಕರಣ ಹಾಗೂ ಅಬಕಾರಿ ಇಲಾಖೆಯಿಂದ ಒಂದು ಪ್ರಕರಣ ದಾಖಲಾಗಿದೆ.