ಉಡುಪಿ: ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಲು ಯತ್ನಿಸಿದ ತಂಡದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಚಿಕ್ಕಮಗಳೂರಿನ ಸಂತೋಷ್ ನಾಯಕ್ (45) ಮತ್ತು ಕಾಪು ಪೊಲಿಪು ನಿವಾಸಿ ದೇವರಾಜ್ ಸುಂದರ್ ಮೆಂಡನ್(46) ಎಂದು ಗುರುತಿಸಲಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಮಣೂರಿನಲ್ಲಿ ಜುಲೈ 25ರಂದು ಘಟನೆ ನಡೆದಿತ್ತು. ಆ ದಿನ ಬೆಳಿಗ್ಗೆ 8.30ಕ್ಕೆ ಮಣೂರಿನ ಕವಿತಾ ಎಂಬವರ ಮನೆಗೆ ಆಗಂತುಕರ ತಂಡವು ಐಟಿ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿತ್ತು. ಶಿಫ್ಟ್ ಮತ್ತು ಇನೋವಾ ಕಾರಿನಲ್ಲಿ ಬಂದ ಸುಮಾರು 6 -8 ಜನ ಅಪರಿಚಿತ ತಂಡವು ದರೋಡೆಗೆ ವಿಫಲ ಯತ್ನಿಸಿ ವಾಪಾಸ್ ಹಿಂದಿರುಗಿತ್ತು. ಮಹಾರಾಷ್ಟದಲ್ಲಿ ಸಂಚು ರೂಪಿಸಿದ ಖದೀಮರು, ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ಕೃತ್ಯ ನಡೆಸುವ ಯೋಜನೆ ಹಾಕಿದ್ದರು.
ಆರೋಪಿಗಳ ಪತ್ತೆಗೆ ಕೋಟ ಠಾಣಾ ಪಿ.ಎಸ್.ಐ ಗುರುನಾಥ ಬಿ ಹಾದಿಮನಿ ಹಾಗೂ ಸುಧಾಪ್ರಭು ಮತ್ತು ಹಿರಿಯಡ್ಕ ಠಾಣಾ ಪಿಎಸ್‌ಐ ಮಂಜುನಾಥ ರವರನ್ನು ಒಳಗೊಂಡ ಪ್ರತ್ಯೇಕ 3 ತಂಡಗಳನ್ನು ರಚಿಸಲಾಗಿತ್ತು. ತನಿಖೆ ಇಳಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸಿಸಿ ಕ್ಯಾಮೆರಾದಲ್ಲಿ ಕಂಡು ಬಂದ ಆರು ಜನರಲ್ಲಿ ಇಬ್ಬರ ಸೆರೆಯಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.