ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್(81) ಅವರು ನಿಧನ ಹೊಂದಿದರು.
ಅವರು ಹೃದಯಾಘಾದಿಂದ ನಿಧನರಾದರು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಕನ್ನಡ ಸಿನಿಮಾರಂಗದಲ್ಲಿ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಅವರು ಇವರು1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ್ದರು. 1964ರಲ್ಲಿ ʼವೀರ ಸಂಕಲ್ಪʼ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ನೂರಾರು ಸಿನಿಮಾಗಳಲ್ಲಿ ಮಿಂಚಿದ್ದರು.
ದ್ವಾರಕೀಶ್ ಅವರು ಹೆಚ್ಚು ಜನಪ್ರಿಯರಾದದ್ದು ವಿಷ್ಣುವರ್ಧನ್ ಅವರೊಂದಿಗೆ ಒಂದು ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು. ವಿಷ್ಣುವರ್ಧನ್ ಅವರ ಅನೇಕ ಸಿನಿಮಾದಲ್ಲಿ ಅವರು ತೆರೆ ಹಂಚಿಕೊಂಡಿದ್ದರು.
1966ರಲ್ಲಿ ದ್ವಾರಕೀಶ್ ಅವರು ʼಮಮತೆಯ ಬಂಧನʼ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದರು. ಡಾ.ರಾಜ್‌ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಎಂಬ ಸಿನಿಮಾ ನಿರ್ಮಿಸುವ ಮೂಲಕ ಸ್ವತಂತ್ರ ನಿರ್ಮಾಪಕರಾಗಿ ಕಾಲಿಟ್ಟರು. ‘ದ್ವಾರಕೀಶ್ ಚಿತ್ರ’ ಬ್ಯಾನರ್ ಅಡಿಯಲ್ಲಿ ಸುಮಾರು 40 ಕ್ಕೂ ಹೆಚ್ಚಿನ ಸಿನಿಮಾಗಳನ್ನು ನಿರ್ಮಿಸಿದ್ದರು.
1985ರಲ್ಲಿ ʼಬಾರಿ ನೀ ಬರೆದ ಕಾದಂಬರಿʼ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟರು. ಆ ಬಳಿಕ ನಂತರʼ ಡಾನ್ಸ್ ರಾಜ ಡಾನ್ಸ್ʼ, ʼಶ್ರುತಿ, ಶ್ರುತಿ ಹಾಕಿದ ಹೆಜ್ಜೆʼ, ʼರಾಯರು ಬಂದರು ಮಾವನ ಮನೆಗೆʼ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು. ಕೊನೆಯದಾಗಿ ಅವರು ʼಚೌಕʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.