ಉಡುಪಿ: ಪರ್ಯಾಯ ಮಹೋತ್ಸವಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಆದ್ರೆ ರಸ್ತೆ ರಿಪೇರಿ ಕಾರ್ಯ ಇನ್ನೂ ನಡೆಯದಿರುವುದು ಒಂದು ಕಡೆ ಬೇಸರಕ್ಕೆ ಕಾರಣವಾದರೆ ಇನ್ನೊಂದೆಡೆ ವಾಹನ ಸವಾರರು ಹೊಂಡಾಗುಂಡಿಗಳ ರಸ್ತೆಯಿಂದ ಬೇಸತ್ತು ಹೋಗಿದ್ದಾರೆ.
ಉಡುಪಿ ನಗರ ಭಾಗದ ರಸ್ತೆಯ ಅವ್ಯವಸ್ಥೆ ಇದು. ರಸ್ತೆ ಮಧ್ಯೆ ಹೊಂಡಾಗುಂಡಿ ಬಿದ್ದು ದ್ವಿಚಕ್ರ ವಾಹನ ಸವಾರರು ಕೈಕಾಲು ಮುರಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಉಡುಪಿಯ ಬೀಡಿನ ಗುಡ್ಡೆಯ ಬಳಿಯ ರಸ್ತೆ ಮಧ್ಯೆ ಅನೇಕ ಬೃಹತ್ ಗಾತ್ರ ಹೊಂಡ ಬಿದ್ದಿದ್ದು, ವಾಹನ ಸವಾರರ ಸಂಕಷ್ಟಕ್ಕೆ ಕಾರಣವಾಗಿದೆ. ಇನ್ನು ಚಿಟ್ಟಾಡಿಯಿಂದ ಹನುಮಾನ ಗ್ಯಾರೇಜ್ ಗೆ ಸಾಗುವ ರಸ್ತೆಯ ಅವ್ಯವಸ್ಥೆಯಂತೂ ಹೇಳ ತೀರದು ಇಲ್ಲಿ ಪೈಪ್ ಲೈನ್ ಕಾಮಗಾರಿಗಾಗಿ ರಸ್ತೆ ಅಗೆದಿದ್ದು ಇದರ ಮರು ಡಾಂಬರೀಕರಣ ಮಾಡದೇ ಹಾಗೇ ಬಿಟ್ಟ ಪರಿಣಾಮ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ.
ಪರ್ಯಾಯ ಮಹೋತ್ಸವ ಎದುರಾದಾಗ ಕನಿಷ್ಟ ರಸ್ತೆಗಳು ಡಾಂಬರೀಕರಣಗೊಳ್ಳುತ್ತದೆ.ಆದ್ರೆ ಈ ಬಾರಿ ಎಲ್ಲಾ ಕಡೆಯ ರಸ್ತೆಗೆ ಈ ಭಾಗ್ಯ ಉಂಟಾ ಗೊತ್ತಿಲ್ಲ ಆದ್ರೆ ಅತೀ ಅಗತ್ಯವಾಗಿ ಆಗಬೇಕಾದ ಕಡೆ ಡಾಂಬರೀಕರಣ ಮಾಡಿ ಎಂಬುದು ಜನ ಸಮಾನ್ಯರ ಒತ್ತಾಯವಾಗಿದೆ. ನಗರಸಭೆಯಿಂದ ಐದು ಕೋಟಿ ರೂ ವೆಚ್ಚದಲ್ಲಿ ಡಾಂಬರೀಕರಣಕ್ಕಾಗಿ ಈಗಾಗಲೇ ಕೆಲಸ ಆರಂಭವಾಗಿದ್ದು ಆದಷ್ಟು ಬೇಗ ನಗರದ ಎಲ್ಲಾ ರಸ್ತೆಗಳಿಗೂ ಡಾಂಬರು ಭಾಗ್ಯ ಸಿಗಲಿ ಎಂಬುದು ಜನ ಸಾಮಾನ್ಯರ ಆಶಯವಾಗಿದೆ.