ಉಡುಪಿ: ಜನಗಣತಿ ಹಾಗೂ ಎಸ್‌ಐಆರ್ (ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ಕುರಿತು ಮಾಹಿತಿ ಕೇಳುವ ನೆಪದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 74 ವರ್ಷದ ವೃದ್ಧೆಯ ಮನೆಗೆ ನುಗ್ಗಿ ಚಿನ್ನದ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ₹5.53 ಲಕ್ಷ ಮೌಲ್ಯದ ಚಿನ್ನದ ಸರ, ವಿದ್ಯುತ್ ಸ್ಕೂಟರ್ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿಟ್ಟೂರು ಸಮೀಪದ ಲಕ್ಷ್ಮೀನಾರಾಯಣ ಕೃಪಾ ನಿವಾಸಿ ಶಾಂತ ಕಾರಂತ್ (74) ಅವರ ಮನೆಗೆ ಅ.7ರಂದು ಸಂಜೆ 3.47ರ ಸುಮಾರಿಗೆ ಇಬ್ಬರು ಅಪರಿಚಿತರು ಬಂದು ಎಸ್‌ಐಆರ್ ಕುರಿತು ಮಾಹಿತಿ ಕೇಳಿದ್ದರು. ಬಳಿಕ ಅವರು ತಂದಿದ್ದ ಕಾಗದಕ್ಕೆ ಮಗನನ್ನು ಕೇಳಿ ಸಹಿ ಮಾಡುವುದಾಗಿ ಹೇಳಿ ಶಾಂತ ಕಾರಂತ್ ಮನೆಯೊಳಗೆ ಹೋದಾಗ, ಇಬ್ಬರೂ ಒಳನುಗ್ಗಿ ಅವರನ್ನು ದೂಡಿ ಕೆಳಕ್ಕೆ ಬೀಳಿಸಿ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಗಾರ್ನೆಟ್ ಮಣಿಗಳಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದರು. ಸರದ ಮೌಲ್ಯ ಸುಮಾರು ₹4 ಲಕ್ಷ ಎಂದು ಅಂದಾಜಿಸಲಾಗಿತ್ತು. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಣಿಪಾಲದಲ್ಲಿ ಬಂಧನ: ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಸ್ಥಳೀಯ ಮಾಹಿತಿಯ ಆಧಾರದಲ್ಲಿ ಅ.10ರಂದು ಮಣಿಪಾಲದ ಮಣ್ಣಪಳ್ಳದಲ್ಲಿ ಆರೋಪಿಗಳಾದ ನಿಟ್ಟೂರಿನ ವಾದಿರಾಜ್ ಗಾಣಿಗ (44) ಹಾಗೂ ಕಾಪು ತಾಲ್ಲೂಕಿನ ಪಡು ಗ್ರಾಮದ ಸಚಿನ್ (30) ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಸುಲಿಗೆ ಮಾಡಿದ ಚಿನ್ನದ ಸರವನ್ನು ಮಣಿಪಾಲದ ಇಂಡಸ್ಟ್ರಿಯಲ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡವಿಟ್ಟಿರುವುದಾಗಿ ತಿಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ 34 ಗ್ರಾಂ ತೂಕದ ಚಿನ್ನದ ಸರ (₹4.50 ಲಕ್ಷ), ಕೃತ್ಯಕ್ಕೆ ಬಳಸಿದ ಓಲಾ ವಿದ್ಯುತ್ ಸ್ಕೂಟರ್ (₹90 ಸಾವಿರ) ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು (₹13 ಸಾವಿರ) ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹5.53 ಲಕ್ಷ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸಾಲ ತೀರಿಸಲು ಸುಲಿಗೆ: ಪ್ರಕರಣದ ಮೊದಲ ಆರೋಪಿ ವಾದಿರಾಜ್ ಗಾಣಿಗ, ಸಂತ್ರಸ್ತೆಯ ನೆರೆಹೊರೆಯವನಾಗಿದ್ದು, ಅವರಿಂದ ಹಾಗೂ ಇತರರಿಂದ ಸಾಲ ಪಡೆದಿದ್ದ. ಎರಡನೇ ಆರೋಪಿ ಸಚಿನ್ ಕೂಡ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸುವ ಮತ್ತು ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಇಬ್ಬರೂ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಠಾಣೆಯ ಪಿಎಸ್‌ಐಗಳಾದ ಭರತೇಶ ಕಂಕಣವಾಡಿ, ರತ್ನಾಕರ್ ಕೆ. ಹಾಗೂ ಸಿಬ್ಬಂದಿ, ಮಣಿಪಾಲ ಠಾಣೆಯ ಸಿಬ್ಬಂದಿ ಮತ್ತು ತನಿಖಾ ಸಹಾಯಕರು ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.
ಉಡುಪಿ: ಎಸ್‌ಐಆರ್ ಮಾಹಿತಿ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ವೃದ್ಧೆಯ ಚಿನ್ನದ ಸರ ಸುಲಿಗೆ

