ಉಡುಪಿ: ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಮುಂಡ್ಕೂರಿನ ಅವರ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ. ಕಾರ್ಕಳ ತಾಲ್ಲೂಕಿನ ಮುಂಡ್ಕೂರಿನೊಂದಿಗೆ ಹಲವು ವರ್ಷಗಳ ಆತ್ಮೀಯ ನಂಟು ಹೊಂದಿದ್ದ ಪಾಟೇಕರ್, ಇಲ್ಲಿನ ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ನೀಡಿದ ನೆರವಿನ ಮೂಲಕ ತಮ್ಮ ನೆನಪನ್ನು ಶಾಶ್ವತಗೊಳಿಸಿದ್ದಾರೆ.
ಸುಮಾರು 25 ವರ್ಷಗಳ ಹಿಂದೆ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ನೆರವು ನೀಡಿದ್ದ ಅವರು, ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಕ್ಕೂ ದೇಣಿಗೆ ನೀಡಿದ್ದರು. ಅವರ ಕೊಡುಗೆಯಿಂದ ನಿರ್ಮಾಣಗೊಂಡಿರುವ ನಾನಾ ಪಾಟೇಕರ್ ಸಭಾಗೃಹ ಇಂದು ಅವರ ಸೇವೆಯ ಸ್ಮರಣೆಯಾಗಿ ಉಳಿದಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಈ ಸಭಾಗೃಹ ಮುಂಡ್ಕೂರಿನ ಪ್ರಮುಖ ನೆನಪುಗಳಲ್ಲಿ ಒಂದಾಗಿದೆ.
ಮುಲ್ಲಡ್ಕದ ಗುರುಪ್ರಸಾದ್ ಸುಧಾಕರ ಶೆಟ್ಟಿ ಅವರ ಆತ್ಮೀಯ ಸ್ನೇಹಿತರಾಗಿದ್ದ ನಾನಾ ಪಾಟೇಕರ್ ಮುಂಡ್ಕೂರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಮುಲ್ಲಡ್ಕ ಬ್ರಹ್ಮ ಬೈದರ್ಕಳ ಗರಡಿ ಹಾಗೂ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗೂ ಅವರು ನೆರವು ನೀಡಿದ್ದರು.
ಮುಂಡ್ಕೂರಿನ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60ನೇ ವರ್ಷದ ಸಂಭ್ರಮದಲ್ಲಿಯೂ ನಾನಾ ಪಾಟೇಕರ್ ಕೊಡುಗೆ ನೀಡಿದ್ದರು. ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಗ್ರಂಥಾಲಯ ಹಾಗೂ ಕಂಪ್ಯೂಟರ್ ಕೊಠಡಿ ನಿರ್ಮಾಣಕ್ಕೆ ನೆರವು ನೀಡಿದ ಅವರು, ಕಂಪ್ಯೂಟರ್‌ಗಳನ್ನೂ ಕೊಡುಗೆಯಾಗಿ ನೀಡಿದ್ದರು.
ಮುಂಡ್ಕೂರಿನಲ್ಲಿ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಆರಂಭಿಸಬೇಕು ಎಂಬ ಆಶಯವನ್ನೂ ಪಾಟೇಕರ್ ವ್ಯಕ್ತಪಡಿಸಿದ್ದರು. ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಯಿಂದ ಶಿಕ್ಷಣ ಕ್ಷೇತ್ರದವರೆಗೆ ವಿವಿಧ ಕಾರ್ಯಗಳಿಗೆ ನೆರವಾಗಿದ್ದ ಅವರು, ಮುಂಡ್ಕೂರಿನ ಪಾಲಿಗೆ ಕರ್ಣನಂತಿದ್ದರು. ಅವರ ಅಗಲಿಕೆಯ ನೋವಿನ ನಡುವೆಯೂ ಅವರು ನೀಡಿದ ಕೊಡುಗೆಗಳು ಹಾಗೂ ಉಳಿಸಿರುವ ನೆನಪುಗಳು ಮುಂಡ್ಕೂರಿನಲ್ಲಿ ಶಾಶ್ವತವಾಗಿ ಉಳಿಯಲಿವೆ.
ಮುಂಡ್ಕೂರಿನಲ್ಲಿ ನಾನಾ ಪಾಟೇಕರ್ ನೆನಪು ಅಮರ

