ಉಡುಪಿ: ಪಾಶ್ಚಾತ್ಯ ಸಂಸ್ಕೃತಿಯತ್ತ ಆಕರ್ಷಿತರಾಗುತ್ತಿರುವ ಯುವಜನರಲ್ಲಿ ಸದಾಚಾರ, ಸನ್ನಡತೆ ಹಾಗೂ ಧಾರ್ಮಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಧಾರ್ಮಿಕ ಆಚರಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ದ್ವಿತೀಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಿನ್ನಿಮುಲ್ಕಿಯಲ್ಲಿ ಅ.17ರಿಂದ 20ರವರೆಗೆ ನಡೆಯಲಿರುವ 9ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಯಶಪಾಲ್ ಸುವರ್ಣ ಅವರು ಉತ್ಸವದ ಸಿದ್ಧತೆ ಹಾಗೂ ರೂಪುರೇಷೆಗಳ ಕುರಿತು ಮಾಹಿತಿ ಪಡೆದು, ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯ ಸಹಕಾರ ನೀಡುವಂತೆ ಸಮಿತಿ ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಭಾಶಂಕರ್ ಪದ್ಮಶಾಲಿ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ನಾಗಭೂಷಣ್ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ಜಯಪ್ರಕಾಶ್ ಕೆದ್ಲಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ದೇವದಾಸ್ ವಿ. ಶೆಟ್ಟಿಗಾರ್ ಸ್ವಾಗತಿಸಿದರು. ಕೋಶಾಧಿಕಾರಿ ರಾಜಶಂಕರ್ ಎ. ವಂದಿಸಿದರು. ನಾಗರಾಜ್ ಕಿನ್ನಿಮುಲ್ಕಿ ನಿರೂಪಿಸಿದರು.
ಧಾರ್ಮಿಕ ಆಚರಣೆಗಳಿಂದ ಯುವಜನರಲ್ಲಿ ಸದಾಚಾರ ಬೆಳೆಸಲು ಸಾಧ್ಯ: ಯಶಪಾಲ್ ಸುವರ್ಣ

