Tuesday, October 6, 2026

ಅಭಿವೃದ್ಧಿಗೆ ಹಣವಿಲ್ಲ, ಸರ್ಕಾರದ ಬೊಕ್ಕಸ ಖಾಲಿ’: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ

Must read

ಉಡುಪಿ: ನಾಲ್ಕು ಬಜೆಟ್‌ ಮಂಡಿಸಿದರೂ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸರ್ಕಾರ ಒಂದೇ ಒಂದು ಹೊಸ ರೇಷನ್‌ ಕಾರ್ಡ್‌ ನೀಡಿಲ್ಲ. ಬಿಪಿಎಲ್‌ ಕಾರ್ಡ್‌ಗಳ ಪರಿಶೀಲನೆ ಹೆಸರಿನಲ್ಲಿ 6 ಸಾವಿರಕ್ಕೂ ಅಧಿಕ ಕಾರ್ಡ್‌ಗಳನ್ನು ರದ್ದುಪಡಿಸಲು ಮುಂದಾಗಿದೆ ಎಂದು ಮಾಜಿ ಸಚಿವ, ಶಾಸಕ ವಿ. ಸುನೀಲ್ ಕುಮಾರ್ ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರ್ಕಳ ಬಿಜೆಪಿ ವತಿಯಿಂದ ಕಾರ್ಕಳ ತಾಲೂಕು ಕಚೇರಿ ಮುಂಭಾಗ ಸೋಮವಾರ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ 3.75 ವರ್ಷಗಳ ಆಡಳಿತ ಪೂರ್ಣಗೊಳಿಸಿದ್ದರೂ ಜನರ ಕಷ್ಟ–ಸುಖಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ರಾಜ್ಯದಲ್ಲಿ ಎಂಟು ತಿಂಗಳಿಂದ ಪಿಂಚಣಿ ಪಾವತಿಯಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ 47,447 ಮಂದಿಯ ಪಿಂಚಣಿ ರದ್ದುಪಡಿಸಲು ಸರ್ಕಾರ ಮುಂದಾಗಿದೆ ಎಂದು ದೂರಿದರು.
ಗೃಹಲಕ್ಷ್ಮಿ ಯೋಜನೆಯಲ್ಲೂ ಪರಿಷ್ಕರಣೆ ನೆಪದಲ್ಲಿ ಫಲಾನುಭವಿಗಳಿಗೆ ತೊಂದರೆ ನೀಡಲಾಗುತ್ತಿದ್ದು, ಪರೋಕ್ಷವಾಗಿ ಯೋಜನೆಯನ್ನು ಸ್ಥಗಿತಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ವಸತಿ ಯೋಜನೆಯಲ್ಲೂ ಸರ್ಕಾರ ವಿಫಲವಾಗಿದೆ. ಉಡುಪಿ ಜಿಲ್ಲೆಯ 34 ಗ್ರಾಮ ಪಂಚಾಯಿತಿಗಳಿಗೆ ಈ ಬಾರಿ ಒಂದೇ ಒಂದು ಮನೆ ಮಂಜೂರಾಗಿಲ್ಲ. ಸರ್ಕಾರದ ಆರ್ಥಿಕ ಸ್ಥಿತಿ ‘ಜೀರೋ ಬ್ಯಾಲೆನ್ಸ್’ ಹಂತಕ್ಕೆ ತಲುಪಿದೆ ಎಂದು ವ್ಯಂಗ್ಯವಾಡಿದರು.
ಮರಳಿನ ಬೆಲೆ ಏರಿಕೆಯಾಗಿದ್ದು, ಮರಳು ಸಾಗಾಟಕ್ಕೆ ಸಂಬಂಧಿಸಿ ಬಡ ಕಾರ್ಮಿಕರ ವಿರುದ್ಧ 70ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು. ವಿದ್ಯುತ್‌ ಬಿಲ್‌ ದರ ಹೆಚ್ಚಳ, ಗಂಗಾ ಕಲ್ಯಾಣ ಹಾಗೂ ಸಾರಥಿ ಯೋಜನೆಗಳಿಗೆ ಅನುದಾನ ನೀಡದಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಸರ್ವರ್‌ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳು ಎದುರಾಗುತ್ತಿವೆ. ಕಾರ್ಕಳದಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿದ ಸುನೀಲ್ ಕುಮಾರ್, ಎಸ್‌ಐಆರ್‌ ಹಾಗೂ ‘ವಂದೇ ಮಾತರಂ’ ವಿಚಾರಗಳನ್ನು ಮುಂದಿಟ್ಟುಕೊಂಡು ಅಭಿವೃದ್ಧಿಯ ದಿಕ್ಕನ್ನು ತಪ್ಪಿಸಲಾಗುತ್ತಿದೆ ಎಂದರು. ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗಲಿ ಎಂದು ಸವಾಲು ಹಾಕಿದರು.
‘ಇದು 60 ಪರ್ಸೆಂಟ್ ಸರ್ಕಾರ’ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟವನ್ನು ಉಡುಪಿ ಜಿಲ್ಲೆಯಿಂದ ಕರಾವಳಿಯಾದ್ಯಂತ ವಿಸ್ತರಿಸಲಾಗುವುದು. ಸರ್ಕಾರದ ವಿರುದ್ಧ ಅಕ್ಟೋಬರ್‌ ತಿಂಗಳಿಡೀ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ನಿಷ್ಕ್ರಿಯಗೊಂಡಿದ್ದು, ಸರ್ಕಾರವೇ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ವಿವಿಧ ಯೋಜನೆಗಳಿಗೆ ಅನುದಾನ ನೀಡುತ್ತಿದ್ದರೂ, ರಾಜ್ಯ ಸರ್ಕಾರ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಆರೋಗ್ಯ ಭಾರತ್ ಸೇರಿದಂತೆ ಕೇಂದ್ರದ ಯೋಜನೆಗಳಿಗೆ ರಾಜ್ಯದಲ್ಲಿ ಪ್ರಚಾರಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಹಿಂದಿನ ಬಿಜೆಪಿ ಸರ್ಕಾರ ₹2,500 ಕೋಟಿ ನೀಡಿತ್ತು. ಪ್ರಸ್ತುತ ಸರ್ಕಾರ ಸಮರ್ಪಕ ಅನುದಾನ ನೀಡದ ಕಾರಣ ಬಿಲ್ಲವ–ಈಡಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಬಿಜೆಪಿ ಕ್ಷೇತ್ರಾಧ್ಯಕ್ಷ ನವಿನ್ ನಾಯಕ್, ಬಿಜೆಪಿ ಪದಾಧಿಕಾರಿಗಳಾದ ಶ್ಯಾಮಲಾ ಕುಂದರ್, ಮಹಾವೀರ ಹೆಗ್ಡೆ, ಮುಟ್ಲುಪಾಡಿ ಸತೀಶ್ ಶೆಟ್ಟಿ, ಮಣಿರಾಜ್ ಶೆಟ್ಟಿ, ರವೀಂದ್ರ ಮೊಯ್ಲಿ, ರವೀಂದ್ರ ಶೆಟ್ಟಿ, ವಿಖ್ಯಾತ್ ಶೆಟ್ಟಿ, ಸುಮಿತ್ ಶೆಟ್ಟಿ, ಆ್ಯಂಟನಿ ನಕ್ರೆ, ಪೃಥ್ವಿರಾಜ್ ಬಿಲ್ಲಾಡಿ, ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕರುಣಾಕರ ಕೋಟ್ಯಾನ್ ಸ್ವಾಗತಿಸಿದರು.

spot_img

More articles

LEAVE A REPLY

Please enter your comment!
Please enter your name here