ಉಡುಪಿ: ಬ್ರಹ್ಮಾವರ ಸಿಟಿ ಸೆಂಟರ್ ಕಟ್ಟಡದಲ್ಲಿ ದಕ್ಷಿಣ ಕನ್ನಡ ಬೆಳೆಗಾರರ ಸಾವಯವ ಸಂಯುಕ್ತ ರೈತ ಉತ್ಪಾದಕ ಕಂಪೆನಿ ಲಿಮಿಟೆಡ್‌ನ ನೂತನ ಬ್ರಹ್ಮಾವರ ಶಾಖೆ ಉದ್ಘಾಟನೆಗೊಂಡಿತು.
ಉಡುಪಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ ಮಾತನಾಡಿ, ರೈತರು ಸಾವಯವ ಕೃಷಿಯತ್ತ ಹೆಚ್ಚು ಒಲವು ತೋರುವಂತೆ ಪ್ರೋತ್ಸಾಹಿಸುವ ಜತೆಗೆ, ಅವರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಂಬಲ ಒದಗಿಸುವ ಕಾರ್ಯ ನೂತನ ರೈತ ಉತ್ಪಾದಕ ಕಂಪೆನಿಯಿಂದ ನಡೆಯಬೇಕು ಎಂದು ಹೇಳಿದರು.
ಸಾವಯವ ಕೃಷಿಗೆ ಉತ್ತೇಜನ ನೀಡಲು ಹಲವು ಯೋಜನೆಗಳಿದ್ದು, ಅವುಗಳ ಪ್ರಯೋಜನ ರೈತರಿಗೆ ತಲುಪುವಂತೆ ಸಂಸ್ಥೆ ಕಾರ್ಯನಿರ್ವಹಿಸಬೇಕು. ಸಂಸ್ಥೆ ಲಾಭ ಗಳಿಸುವುದರ ಜತೆಗೆ ಅದರ ಹೆಚ್ಚಿನ ಪಾಲು ರೈತರಿಗೆ ತಲುಪುವಂತಾಗಬೇಕು. ರೈತರ ಉತ್ಪನ್ನಗಳಿಗೆ ಬೆಂಬಲ ನೀಡುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಅವರು ಹೇಳಿದರು.
ಟಿಎಪಿಸಿಎಂಎಸ್ ಉಡುಪಿ ತಾಲೂಕು ಅಧ್ಯಕ್ಷ ಅಶೋಕ್ ಶೆಟ್ಟಿ ಮೈರ್ಮಾಡಿ ಮಾತನಾಡಿ, ರೈತರಿಗೆ ನೆರವಾಗುವ ಉದ್ದೇಶದಿಂದ ಆರಂಭಗೊಂಡ ಹಲವು ಸಹಕಾರಿ ಸಂಸ್ಥೆಗಳು ಇಂದು ವೈಯಕ್ತಿಕ ಲಾಭಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸಾಮಾನ್ಯವಾಗಿದೆ. ನೂತನ ರೈತ ಉತ್ಪಾದಕ ಕಂಪೆನಿ ರೈತರ ಏಳಿಗೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ಉಡುಪಿ ತಾಲೂಕು ಕೈಗಾರಿಕಾ ಸೊಸೈಟಿ ಬ್ಯಾಂಕ್, ಬ್ರಹ್ಮಾವರದ ಅಧ್ಯಕ್ಷ ಅರುಣ್ ಶೆಟ್ಟಿ ಮಾತನಾಡಿ, ಸಾವಯವ ಕೃಷಿ ಮಾಡುವ ರೈತರಿಗೆ ಸಹಕಾರ ನೀಡುವ ಉದ್ದೇಶದಿಂದ ಆರಂಭಗೊಂಡಿರುವ ಸಂಸ್ಥೆ ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಡಿಕೆ ಗ್ರೂಪ್ ಆಫ್ ಕಂಪೆನೀಸ್ ಸಂಸ್ಥಾಪಕ ಆಲ್ವಿನ್ ಜೊಯೆಲ್ ನೊರೊನ್ಹಾ ನೂತನ ಶಾಖೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಮಾಜಸೇವಕ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಚೇರ್ಕಾಡಿಯ ಪ್ರಗತಿಪರ ಕೃಷಿಕ ಮಂಜುನಾಥ ನಾಯಕ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ರೇವಣ್ಣ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಸತೀಶ್ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರಿ ಎಸ್. ಸಂಗೀತಾ ನಾಯಕ್, ನಿರ್ದೇಶಕರಾದ ಕಿರಣ್ ಬಂಗೇರ, ಕೃಷ್ಣಪ್ಪ ಮಡಿವಾಳ, ದಯಾನಂದ ಪಿಜಕ್ಕಳ, ಸೀತಾರಾಮ ನಾಯ್ಕ್, ಅಜೀಜ್ ಎನ್. ಕುಂಡೋಳಿ ಮತ್ತಿತರರು ಉಪಸ್ಥಿತರಿದ್ದರು.




