ಉಡುಪಿ: ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲ್ಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ ಸೌಪರ್ಣಿಕಾ ನದಿ ಸಮೀಪ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮೃತರನ್ನು ವಿಟ್ಟಲ್ ನಾಯಕ್ (35) ಹಾಗೂ ಭವ್ಯಾ ಅಲಿಯಾಸ್ ನಿಶ್ಮಿತಾ (33) ಎಂದು ಗುರುತಿಸಲಾಗಿದೆ.
ವಿಠ್ಠಲ್ ನಾಯ್ಕ್ ಹಾಗೂ ಭವ್ಯಾ ಜೊತೆ ಸೇರಿ ಅನಾರೋಗ್ಯದಲ್ಲಿದ್ದ ವಿಠಲ್ ನಾಯ್ಕ್ ಪತ್ನಿಗೆ ಇಂಜೆಕ್ಷನ್‌ಗಳನ್ನು ನೀಡಿ ವಿಷಪ್ರಾಶನಗೊಳಿಸಿ ಕೊಲೆ ಮಾಡಲು ಯತ್ನಿಸಿದ್ದರು ಎನ್ನಲಾಗಿದ್ದು, ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಇಬ್ಬರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.
ಭವ್ಯಾ ಹಾಗೂ ವಿಠ್ಠಲ್ ಅಕ್ರಮ ಸಂಬಂಧ ಹೊಂದಿದ್ದು, ನರ್ಸ್ ಎಂದು ಪರಿಚಯಿಸಿ ಪತ್ನಿಗೆ ಇಂಜೆಕ್ಷನ್ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಇಬ್ಬರು ನಾಪತ್ತೆಯಾಗಿದ್ದರು. ಈ ಪ್ರಕರಣದಡಿ ಕೊಲ್ಲೂರು ಪೊಲೀಸರು ಇಬ್ಬರು ಆರೋಪಿಗಳ ಪತ್ತೆಗೆ ಶೋದ ಕಾರ್ಯ ನಡೆಸುತ್ತಿದ್ದರು.
ಈ ಮಧ್ಯೆ ಆರೋಪಿಗಳ ಮೃತದೇಹ ಬೈಂದೂರು ಠಾಣೆ ವ್ಯಾಪ್ತಿಯ ಗೋಳಿಹೊಳೆ ಪ್ರದೇಶದಲ್ಲಿ ಪತ್ತೆಯಾಗಿದ್ದು ಇಬ್ಬರೂ ಕೆಲವು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳಕ್ಕೆ ಬೈಂದೂರು ಪೊಲೀಸರು, ಸೋಕೋ ತಂಡ ತೆರಳಿ ಪರಿಶೀಲನೆ ನಡೆಸಿದೆ. ಬೈಂದೂರು ಸಿಪಿಐ ಶಿವಕುಮಾರ್, ಕೊಲ್ಲೂರು ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ, ಬೈಂದೂರು ಪಿಎಸ್ಐ ಸುನೀಲ್ ಭೇಟಿ ನೀಡಿದರು.
ಬೈಂದೂರು: ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

